ಪೆರಾಜೆ: ಸೇವಾಖಂಡದ ಪ್ರೇರಣಾ ತರಬೇತಿ ತಂಡ, ಸಂಘಟನಾ ಖಂಡ ಹವ್ಯಕ ಮಹಾಮಂಡಲ ಮಂಗಳೂರು ಪ್ರಾಂತ್ಯ ಹಾಗೂ ಮಾಣಿ ಮಠದ ಕ್ರಿಯಾಸಮಿತಿ ಇವುಗಳ ಸಹಯೋಗದಲ್ಲಿ ಉದ್ಯಮಶೀಲತೆ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಾಗಾರವು ಕಾರ್ತಿಕ ಶುಕ್ಲ ತ್ರಯೋದಶಿಯಂದು (ನವೆಂಬರ್ 22) ಶ್ರೀಮಠದ ಪೆರಾಜೆ ಶಾಖೆಯಲ್ಲಿ ಯಶಸ್ವಿಯಾಗಿ ನಡೆಯಿತು. ಗುರುವಂದನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಮಾಣಿ ಮಠ ಕ್ರಿಯಾಸಮಿತಿ ಅಧ್ಯಕ್ಷ ಹಾಗೂ ಶಾಸನತಂತ್ರ ಸಂಪನ್ಮೂಲ ಖಂಡದ ಶ್ರೀಸಂಯೋಜಕ ಹಾರೆಕೆರೆ ನಾರಾಯಣ ಭಟ್ ಉದ್ಘಾಟಿಸಿದರು.

ಕಾರ್ಯಾಗಾರದ ಬೆಳಗ್ಗಿನ ಅವಧಿಯಲ್ಲಿ ಯಶಸ್ವಿ ಉದ್ಯಮಿಗಳ ಅನುಭವ ಹಂಚಿಕೆ ಗೋಷ್ಠಿ ನಡೆಯಿತು. ಇದರಲ್ಲಿ ವಿಶೇಷವಾಗಿ ಗಮನ ಸೆಳೆದ ‘ಕ್ರೋಶೆ ಆನ್ ವ್ಹೀಲ್ಸ್’ (Crochet on Wheels) ಸಂಸ್ಥೆಯ ಉದ್ಯಮಿ ಪೂರ್ಣಿಮಾ ಭಟ್ ಅವರು, ತಾವು ಕಟ್ಟಿ ಬೆಳೆಸಿದ ಸ್ವ-ಉದ್ಯಮದ ಯಶೋಗಾಥೆಯನ್ನು ವಿವರಿಸಿದರು. ಸ್ವ-ಉದ್ಯಮ ಆರಂಭಿಸುವಾಗ ಎದುರಾಗುವ ಆರಂಭಿಕ ಸವಾಲುಗಳು ಹಾಗೂ ಅವುಗಳನ್ನು ಮೆಟ್ಟಿ ನಿಂತು ಯಶಸ್ಸು ಸಾಧಿಸುವ ಬಗೆಯ ಕುರಿತು ಅವರು ನೀಡಿದ ಮಾರ್ಗದರ್ಶನ ಶಿಬಿರಾರ್ಥಿಗಳಿಗೆ ಪ್ರೇರಣೆಯಾಯಿತು. ಇವರೊಂದಿಗೆ ಸುಧೀರ್ ಕೃಷ್ಣ (ಪ್ರೀಮಿಯರ್ ಫ್ರೆಶ್ ಡ್ರಿಂಕಿಂಗ್ ವಾಟರ್) ಹಾಗೂ ಶ್ರೀನಂದನ್ (ಪೂಗ ಸಿರಿ ಧೋಟಿ ಸರ್ವಿಸಸ್) ತಮ್ಮ ಉದ್ಯಮದ ಅನುಭವಗಳನ್ನು ಹಂಚಿಕೊಂಡರು.


ಇದೇ ಸಂದರ್ಭದಲ್ಲಿ ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಅಶ್ವಿನ್ ಟಿ. ಭಟ್ ಅವರು ಸ್ವ-ಉದ್ಯಮಕ್ಕೆ ಬ್ಯಾಂಕ್ನಿಂದ ಲಭ್ಯವಿರುವ ಆರ್ಥಿಕ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನದ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ಕುರಿತು ವಿವರಿಸಿದರೆ, ಪ್ರೇರಣಾ ತಂಡದ ವಿಜೇತ್ ಪೆರುಂಬಾರು ಅವರು ಸೋಲಿನ ಭಯವನ್ನು ಎದುರಿಸುವ ಕುರಿತು ಚಟುವಟಿಕೆಗಳ ಮೂಲಕ ತರಬೇತಿ ನೀಡಿದರು.
30ಕ್ಕೂ ಅಧಿಕ ಮಂದಿ ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸನತಂತ್ರ ಸಂಘಟನಾ ಖಂಡ – ಹವ್ಯಕ ಮಹಾಮಂಡಲ ಅಧ್ಯಕ್ಷ ಡಾ. ವೈ. ವಿ. ಕೃಷ್ಣಮೂರ್ತಿ ಅವರು ಮಾತನಾಡಿ, ಇಂತಹ ಉದ್ಯಮಶೀಲತೆ ಕಾರ್ಯಾಗಾರಗಳು ಇಂದಿನ ಅಗತ್ಯವಾಗಿದ್ದು, ಇನ್ನೂ ಹೆಚ್ಚಿನ ಕಡೆಗಳಲ್ಲಿ ನಡೆಯಬೇಕು ಎಂದು ಹಾರೈಸಿದರು.

