ಪುತ್ತೂರು: ತೀಯಾ ಸಮಾಜ ಬಂಧುಗಳಿಗೆ 1 ಎಕ್ರೆ ನಿವೇಶನ ಮಂಜೂರಾತಿ – ಪತ್ರ ವಿತರಿಸಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ತೀಯಾ ಸಮಾಜ ಬಂಧುಗಳಿಗೆ 1 ಎಕ್ರೆ ನಿವೇಶನ ಮಂಜೂರಾತಿ – ಪತ್ರ ವಿತರಿಸಿದ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು ವಿಧಾನಸಭಾ ಕ್ಷೇತ್ರದ ತೀಯಾ ಸಮಾಜದ ಬಂಧುಗಳ ಹಲವು ವರ್ಷಗಳ ದಶಕದ ಬೇಡಿಕೆ ಕೊನೆಗೂ ಈಡೇರಿದೆ. ತೀಯಾ ಸಮುದಾಯಕ್ಕೆ ಮಂಜೂರಾದ 1 ಎಕ್ರೆ ನಿವೇಶನದ ಅಧಿಕೃತ ಮಂಜೂರಾತಿ ಪತ್ರವನ್ನು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಇಂದು ವಿತರಿಸಿದರು. ಸಮುದಾಯದ ಭವನ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಜಾಗ ಮಂಜೂರು ಮಾಡಿಕೊಡುವಂತೆ ಸಮಾಜದ ಬಂಧುಗಳು ದೀರ್ಘಕಾಲದಿಂದ ಶಾಸಕರಲ್ಲಿ ಮನವಿ ಮಾಡಿದ್ದರು. ಸಮಾಜದ ಈ ನ್ಯಾಯಯುತ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಸರ್ಕಾರದ ಮಟ್ಟದಲ್ಲಿ ಶ್ರಮಿಸಿ ಜಾಗ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಬಹುದಿನಗಳ ಕನಸನ್ನು ಈಡೇರಿಸಿಕೊಟ್ಟ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ತೀಯಾ ಸಮಾಜದ ಪ್ರಮುಖರು ಹಾಗೂ ಬಂಧುಗಳು ಕೃತಜ್ಞತೆ ಸಲ್ಲಿಸಿ, ಆತ್ಮೀಯವಾಗಿ ಸನ್ಮಾನ ಗೌರವ ಸಮರ್ಪಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, “ಕ್ಷೇತ್ರದ ಪ್ರತಿಯೊಂದು ಸಮುದಾಯದ ಏಳಿಗೆ ಹಾಗೂ ಮೂಲಸೌಕರ್ಯ ಒದಗಿಸುವುದು ನಮ್ಮ ಆದ್ಯತೆಯಾಗಿದ್ದು, ಈ ನಿವೇಶನವು ತೀಯಾ ಸಮಾಜದ ಶ್ರೇಯೋಭಿವೃದ್ಧಿ ಹಾಗೂ ಸಾಂಸ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ” ಎಂದು ಆಶಿಸಿದರು.

ಮಂಜೂರಾತಿ ಪತ್ರ ಕೈಸೇರುತ್ತಿದ್ದಂತೆ ತೀಯಾ ಸಮಾಜದ ಮುಖಂಡರು ಹಾಗೂ ಬಂಧುಗಳಲ್ಲಿ ಅಪಾರ ಹರ್ಷ ವಾತಾವರಣ ವ್ಯಕ್ತವಾಯಿತು. ಶಾಸಕರ ತ್ವರಿತ ಸ್ಪಂದನೆ ಹಾಗೂ ಕಾಳಜಿಯನ್ನು ಸಮಾಜದ ಪ್ರಮುಖರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ತೀಯಾ ಸಮಾಜದ ಪ್ರಮುಖ ನಾಯಕರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಪ್ರಾದೇಶಿಕ ರಾಜಕೀಯ ರಾಜ್ಯ