ವಾಹನದ ಇಂಧನಕ್ಕಿರುವ ಕಾಳಜಿ, ನಿಮ್ಮ ಆಹಾರಕ್ಕೂ ಇರಲಿ! – ರಾಮಚಂದ್ರಾಪುರ ಶ್ರೀ

ವಾಹನದ ಇಂಧನಕ್ಕಿರುವ ಕಾಳಜಿ, ನಿಮ್ಮ ಆಹಾರಕ್ಕೂ ಇರಲಿ! – ರಾಮಚಂದ್ರಾಪುರ ಶ್ರೀ

  • ಜಠರಾಗ್ನಿ ಶರೀರದ ಪ್ರತಿಬಿಂಬ
  • ವಾಹನಕ್ಕೆ ಇಂಧನವಿದ್ದಂತೆ ದೇಹಕ್ಕೆ ಆಹಾರ
  • ದೇಹವೆಂಬ ವಾಹನ: ಒಮ್ಮೆ ಕೆಟ್ಟರೆ ಸಿಗದು ಮತ್ತೊಂದು!

ಗೋಕರ್ಣ ; ಅಗ್ನಿಯ ಪ್ರತಿಬಿಂಬವೇ ನಮ್ಮ ಶರೀರವಾಗಿದ್ದು, ಅಗ್ನಿಯ ಸೌಖ್ಯವೇ ನಮ್ಮ ಸೌಖ್ಯವಾಗಿರುತ್ತದೆ. ದೇಹದಲ್ಲಿ ಅಗ್ನಿ ಶಾಂತವಾದರೆ ಮರಣ, ಅಗ್ನಿ ಕೆಟ್ಟರೆ ರೋಗ ಹಾಗೂ ಅಗ್ನಿ ಸರಿಯಾಗಿದ್ದರೆ ನಿರೋಗಿಯಾಗಿ ದೀರ್ಘಾಯುಷಿಯಾಗಿ ಬಾಳಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 12.08.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ‘ಜಠರಾಗ್ನಿ’ಯ ಕುರಿತಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಅಗ್ನಿ ಇದ್ದಂತೆ ನಾವಿರುತ್ತೇವೆ. ಹಾಗಾಗಿ ಜಠರಾಗ್ನಿಗೆ ನಾವು ಏನನ್ನು? ಹೇಗೆ? ಹಾಗೂ ಯಾವಾಗ ನೀಡುತ್ತೇವೆ ಎನ್ನುವುದು ಮುಖ್ಯವಾಗಿದ್ದು, ಇದರ ಆಧಾರದಂತೆ ನಮ್ಮ ಶರೀರದ ಸ್ವಾಸ್ಥ್ಯ ನಿಂತಿದೆ. ವಾಹನಕ್ಕೂ ದೇಹಕ್ಕೂ ಹೋಲಿಕೆಯನ್ನು ಮಾಡಬಹುದಾಗಿದ್ದು, ಇಂಧನವು ಅಗ್ನಿಯಾಗಿ ಎಲ್ಲಾ ರೀತಿಯ ವಾಹನಗಳ ಚಾಲನೆಗೆ ಶಕ್ತಿಯಾಗಿ, ಚಲಿಸುವ ಶಕ್ತಿಯನ್ನು ನೀಡುತ್ತದೆ. ಹಾಗೆಯೇ ದೇಹಕ್ಕೆ ಬೇಕಾದ ಶಕ್ತಿಯನ್ನು ಆಹಾರವೆಂಬ ಇಂಧನ ನೀಡುತ್ತದೆ. ವಾಹನದಲ್ಲಿ ಇಂಧನ ಮಾಧ್ಯಮವಾಗಿ ಮಾತ್ರ ಕೆಲಸ ಮಾಡುತ್ತದೆ. ಆದರೆ ದೇಹದಲ್ಲಿ ಆಹಾರವೆಂಬ ಇಂಧನ ನಮ್ಮೊಳಗೆ ನಾವೇ ಆಗಿ ಪರಿವರ್ತಿತವಾಗುತ್ತದೆ. ವಾಹನದಲ್ಲಿ ಶಕ್ತಿಯೆಂಬ ಅಗ್ನಿಯನ್ನು ನಿಲ್ಲಿಸಿ, ಮತ್ತೆ ಪುನರಾರಂಭಿಸಬಹುದು. ಆದರೆ ದೇಹದಲ್ಲಿ ಅಗ್ನಿ ಸ್ಥಬ್ಧವಾದರೆ ಪುನಃ ಅದು ಕೆಲಸ ಮಾಡುವುದಿಲ್ಲ. ಹಾಗಾಗಿ ದೇಹಾಗ್ನಿಯ ವಿಚಾರದಲ್ಲಿ ಅತಿಯಾದ ಕಾಳಜಿ ಅತ್ಯಗತ್ಯ ಎಂದರು.

ದೇಹದಲ್ಲಿ ಮನ್ನಸ್ಸಿಗೂ ಅಗ್ನಿಗೂ ಗಾಢವಾದ ಸಂಬಂಧವಿದ್ದು, ಅಗ್ನಿ ಹಾಗೂ ಮನಸ್ಸುಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಕಾರ್ಯನಿರ್ವಹಿಸುತ್ತದೆ. ಆದರೆ ವಾಹನದಲ್ಲಿ ಯಾಂತ್ರಿಕತೆ ಮಾತ್ರವಿದೆ. ವಾಹನದಲ್ಲಿ ಇಂಧನದ ಜೊತೆಗೆ ಗಾಳಿಯ ಸಹಕಾರವೂ ಬೇಕು ಹಾಗೆಯೇ ದೇಹದಲ್ಲೂ ಪ್ರಾಣಶಕ್ತಿಯ ಸಹಕಾರ ಅಗತ್ಯ. ವಾಹನವು ಇಂಧನವನ್ನು ಬಳಸಿಕೊಂಡು ದೇಶ ವಿದೇಶಗಳ ಸಂಚಾರವನ್ನು ಮಾಡಬಹುದು. ಆದರೆ ದೇಹಕ್ಕೆ ಸರಿಯಾದ ಆಹಾರವೇಂಬ ಇಂಧನವನ್ನು ಒದಗಿಸಿದಾಗ ಅದು ಇಂದಿನ ವಿಜ್ಞಾನ ತಲುಪದ ಲೋಕಗಳಿಗೂ ನಾವು ಪ್ರಯಾಣಿಸಬಹುದು ಎಂದು ಸಮರ್ಪಕ ಆಹಾರದ ಮಹತ್ವವನ್ನು ವಿವರಿಸಿದರು.

ಪ್ರಾಚೀನರ ಸಂಶೋಧನೆಗಳು ಅಂತರ್ಮುಖವಾದರೆ, ಇಂದಿನ ಸಂಶೋಧನೆಗಳು ಬಾಹ್ಯಕ್ಕೆ ಸಂಬಂಧಿಸಿದ್ದು. ಯಾವುದು ದೇಹದಲ್ಲಿ ಇದೆಯೋ ಅದೇ ಬ್ರಹ್ಮಾಂಡದಲ್ಲಿ ಇದೆ ಎಂಬ ಮಾತಿದ್ದು, ಕೇವಲ ನಾಡಿಯನ್ನು ನೋಡಿ ನಕ್ಷತ್ರ ವಾರಾದಿಗಳನ್ನು ತಿಳಿದುಕೊಳ್ಳಲು ಸಾಧ್ಯ. ನಮ್ಮ ಪೂರ್ವಜರು ಅಂತರಂಗದ ಮೂಲಕವೇ ಬಹಿರಂಗದ ವಿಷಯಗಳನ್ನು ತಿಳಿದುಕೊಂಡಿದ್ದರು ಎಂದು ಪ್ರಾಚೀನ ಭಾರತದ ವಿಜ್ಞಾನವನ್ನು ಪ್ರಶಂಸಿಸಿದರು.

ಕುಮಟಾ ಹವ್ಯಕ ಮಂಡಲದ ಧಾರೇಶ್ವರ, ವಾಲಗಳ್ಳಿ, ಕೆಕ್ಕಾರು, ಕುಮಟಾ, ಕಾರವಾರ ಅಂಕೋಲಾ ಹವ್ಯಕ ವಲಯಗಳ ಪರವಾಗಿ ನಾಗರಾಜ ನಾರಾಯಣ ಜೋಶಿ ದಂಪತಿಗಳು ಗುರುಭಿಕ್ಷಾ ಸೇವೆ ಸಮರ್ಪಿಸಿದರು. ಎಸ್. ವಿ.ಹೆಗಡೆ ಭದ್ರನ್, ಕೃಷ್ಣಾನಂದ ಹೊಳೆಗದ್ದೆ, ಜಿ. ಎಸ್. ಹೆಗಡೆ ಕುಮಟಾ, ಸ್ವಾತಿ ಭಾಗ್ವತ್, ವಾದಿರಾಜ ಸಾಮಗ, ದಿನ ಪ್ರಧಾನರಾದ ಪರಮೇಶ್ವರ ನಾರಾಯಣ ಭಟ್ಟ ದಂಪತಿಗಳು ಉಪಸ್ಥಿತರಿದ್ದರು.

ಬಾಕ್ಸ್)))
ವಾಹನಕ್ಕೆ ಇಂಧನವನ್ನು ತುಂಬಿಸುವಾಗ ಯಾವ ಜಾಗ್ರತೆಯನ್ನು ವಹಿಸುತ್ತೇವೆಯೋ, ಕನಿಷ್ಠ ಅಷ್ಟಾದರೂ ಜಾಗ್ರತೆಯನ್ನು ಆಹಾರವನ್ನು ಸ್ವೀಕರಿಸುವಾಗ ವಹಿಸಬೇಕು. ದೇಹವು ಆರೋಗ್ಯವಾಗಿದ್ದರೆ ನೂರು ವಾಹನಗಳನ್ನು ಕೊಳ್ಳಬಹುದು. ಆದರೆ ದೇಹವೆಂಬ ವಾಹನ ಕೆಟ್ಟು ನಿಂತರೆ ಸರಿಪಡಿಸುವುದು ಬಹಳ ಕಷ್ಟ – ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ

Uncategorized