ನವದೆಹಲಿ: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಳೆಗಟ್ಟಿದ್ದು, ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಆಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಆಗಸ್ಟ್ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಕೊತ್ತಲದ ಮೇಲೆ ರಾಷ್ಟ್ರಧ್ವಜ ರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯು ಹಲವು ಐತಿಹಾಸಿಕ ಮತ್ತು ವಿಶೇಷ ಅಂಶಗಳಿಗೆ ಸಾಕ್ಷಿಯಾಗುತ್ತಿರುವುದು ವಿಶೇಷ.

ವಿಶೇಷ ಆಕರ್ಷಣೆ: ಪ್ರಥಮ ಬಾರಿಗೆ ‘ವಂದೇ ಮಾತರಂ’ ಗಾಯನರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂಭ್ರಮವನ್ನು ಸ್ಮರಿಸುವ ನಿಟ್ಟಿನಲ್ಲಿ, ಈ ಬಾರಿಯ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣದ ನಂತರ ‘ವಂದೇ ಮಾತರಂ’ ಗೀತೆಯನ್ನು ಅಧಿಕೃತವಾಗಿ ಪ್ರಸ್ತುತಪಡಿಸಲಾಗುತ್ತಿದೆ. ಪ್ರಧಾನಿಯವರು ಧ್ವಜಾರೋಹಣ ನೆರವೇರಿಸಿದ ತಕ್ಷಣ, ಭಾರತೀಯ ಭೂಸೇನೆಯ ಬ್ಯಾಂಡ್ ವಾದ್ಯದೊಂದಿಗೆ ವಂದೇ ಮಾತರಂ ಗೀತೆಯು ಮೊಳಗಲಿದೆ.

ಇದರೊಂದಿಗೆ, ವಾಯುಪಡೆಯ ಎರಡು ಎಂಐ-17 (Mi-17) ಹೆಲಿಕಾಪ್ಟರ್ಗಳ ಮೂಲಕ ಪುಷ್ಪವೃಷ್ಟಿ ಕರೆಯಲಾಗುವುದು. ಇದರಲ್ಲಿ ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಮತ್ತು ಇನ್ನೊಂದು ‘ವಂದೇ ಮಾತರಂ’ ಲಾಂಛನವಿರುವ ಧ್ವಜವನ್ನು ಪ್ರದರ್ಶಿಸಲಿದೆ.
’ಯುವ ಶಕ್ತಿ’ ಮತ್ತು ವಿಕಸಿತ ಭಾರತದ ಸಂಕಲ್ಪ’ ವಿಕಸಿತ ಭಾರತ 2047’ರತ್ತ ದೇಶ ಸಾಗುತ್ತಿರುವ ಈ ಸಂದರ್ಭದಲ್ಲಿ, ದೇಶದ ‘ಯುವ ಶಕ್ತಿ’ಯ ಕೊಡುಗೆ ಮತ್ತು ಆಶೋತ್ತರಗಳನ್ನು ಗೌರವಿಸುವುದು ಈ ಬಾರಿಯ ಪ್ರಮುಖ ಆಶಯವಾಗಿದೆ. ಜ್ಞಾನಪಥದಲ್ಲಿ ಎನ್ಸಿಸಿ (NCC) ಹಾಗೂ ‘ಮೈ ಭಾರತ್’ (My Bharat) ಸ್ವಯಂಸೇವಕರ ಸುಮಾರು 2,500 ಕೆಡೆಟ್ಗಳು ಭಾಗವಹಿಸಲಿದ್ದು, ಪ್ರಧಾನಿಯವರ ಭಾಷಣದ ನಂತರ ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ.

