ಬೆಂಗಳೂರು / ಹಾಸನ:ನೈಋತ್ಯ ರೈಲ್ವೆಯ ಮೈಸೂರು ವಿಭಾಗದ
ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ಎಡಕುಮೇರಿ – ಸಿರಿಬಾಗಿಲು ರೈಲ್ವೆ ನಿಲ್ದಾಣಗಳ ಮಧ್ಯೆ ಶನಿವಾರ ರಾತ್ರಿ ಭಾರಿ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಈ ಮಾರ್ಗದಲ್ಲಿ ಚಲಿಸುವ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಲಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪದೇ ಪದೇ ಮಣ್ಣು ಕುಸಿಯುತ್ತಿದ್ದು, ಹಳಿ ತೆರವು ಕಾರ್ಯಾಚರಣೆಗೆ ಅಡ್ಡಿಯುಂಟಾಗಿದೆ. ರೈಲ್ವೆ ಇಲಾಖೆಯ ಸಿಬ್ಬಂದಿ ಹಿಟಾಚಿ ಯಂತ್ರಗಳ ನೆರವಿನಿಂದ ಹಳಿಗಳ ಮೇಲೆ ಬಿದ್ದಿರುವ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸುವ ಕಾಮಗಾರಿಯಲ್ಲಿ ನಿರತರಾಗಿದ್ದಾರೆ.
ಸಂಪೂರ್ಣ ರದ್ದುಗೊಂಡಿರುವ ರೈಲುಗಳ ವಿವರ (Cancellation)ದಕ್ಷಿಣ ಪಶ್ಚಿಮ ರೈಲ್ವೆ ಬಿಡುಗಡೆ ಮಾಡಿರುವ ಬುಲೆಟಿನ್-4 ರ ಪ್ರಕಾರ ಕೆಳಗಿನ ರೈಲುಗಳನ್ನು ರದ್ದುಗೊಳಿಸಲಾಗಿದೆ:● ರೈಲು ಸಂಖ್ಯೆ 16540: ಮಂಗಳೂರು ಜಂಕ್ಷನ್ – ಯಶವಂತಪುರ ಎಕ್ಸ್ಪ್ರೆಸ್ (ದಿನಾಂಕ 02.08.2026). ● ರೈಲು ಸಂಖ್ಯೆ 16575: ಯಶವಂತಪುರ – ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ (ದಿನಾಂಕ 02.08.2026).

ಭಾಗಶಃ ಸ್ಥಗಿತಗೊಂಡಿರುವ ರೈಲುಗಳು (Short Termination)ಬುಲೆಟಿನ್-3 ರ ಪ್ರಕಾರ ಈ ಕೆಳಗಿನ ರೈಲುಗಳ ಸಂಚಾರವನ್ನು ಮಧ್ಯದಲ್ಲೇ ಸ್ಥಗಿತಗೊಳಿಸಲಾಗಿದೆ:
- 16585 SMVT ಬೆಂಗಳೂರು – ಮುರುಡೇಶ್ವರ ಎಕ್ಸ್ಪ್ರೆಸ್: ಹಾಸನದಲ್ಲಿಯೇ ಪ್ರಯಾಣ ಮುಕ್ತಾಯಗೊಳಿಸಲಾಗಿದ್ದು, ಹಾಸನ ಮತ್ತು ಮುರುಡೇಶ್ವರ ನಡುವೆ ರದ್ದುಗೊಳಿಸಲಾಗಿದೆ.
- 16511 KSR ಬೆಂಗಳೂರು – ಕೋಝಿಕ್ಕೋಡ್ ಎಕ್ಸ್ಪ್ರೆಸ್: ಹಾಸನದಲ್ಲೇ ಪ್ರಯಾಣ ಸ್ಥಗಿತ.
- 17377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್: ಹಾಸನದಲ್ಲೇ ಪ್ರಯಾಣ ಸ್ಥಗಿತ.
- 16595 KSR ಬೆಂಗಳೂರು – ಕಾರವಾರ ಎಕ್ಸ್ಪ್ರೆಸ್: ಸಕಲೇಶಪುರದಲ್ಲಿ ಪ್ರಯಾಣ ಮುಕ್ತಾಯಗೊಳಿಸಲಾಗಿದೆ.
- 16586 ಮುರುಡೇಶ್ವರ – SMVT ಬೆಂಗಳೂರು ಎಕ್ಸ್ಪ್ರೆಸ್: ಸುಬ್ರಹ್ಮಣ್ಯ ರೋಡ್ವರೆಗೆ ಮಾತ್ರ ಸಂಚಾರ.
- 16512 ಕೋಝಿಕ್ಕೋಡ್ – KSR ಬೆಂಗಳೂರು ಎಕ್ಸ್ಪ್ರೆಸ್: ಕಬಕ ಪುತ್ತೂರು ನಿಲ್ದಾಣದಲ್ಲಿ ಪ್ರಯಾಣ ಮುಕ್ತಾಯ.
- 17378 ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್ಪ್ರೆಸ್: ಸುಬ್ರಹ್ಮಣ್ಯ ರೋಡ್ವರೆಗೆ ಮಾತ್ರ ಚಲಿಸಲಿದೆ.

ರೈಲ್ವೆ ಇಲಾಖೆ ಮನವಿ: ”ಭಾರಿ ಮಳೆಯಿಂದಾಗಿ ಕುಸಿತಗೊಂಡಿರುವ ಸ್ಥಳದಲ್ಲಿ ದುರಸ್ತಿ ಕಾಮಗಾರಿ ತೀವ್ರಗತಿಯಲ್ಲಿ ನಡೆಯುತ್ತಿದೆ. ಪ್ರಯಾಣಿಕರಿಗೆ ಆಗುವ ಅನಾನುಕೂಲವನ್ನು ತಪ್ಪಿಸಲು ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ರೈಲುಗಳ ಸಂಚಾರದ ಮುಂದಿನ ಬದಲಾವಣೆಗಳ ಕುರಿತು ಅಧಿಕೃತ ಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗುವುದು” ಎಂದು ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ್ ಕನಮಡಿ ತಿಳಿಸಿದ್ದಾರೆ.ಪ್ರಯಾಣಿಕರು ಪ್ರಯಾಣ ಬೆಳೆಸುವ ಮೊದಲು ರೈಲ್ವೆ ಇಲಾಖೆಯ ಅಧಿಕೃತ ಹೆಲ್ಪ್ಲೈನ್ ಅಥವಾ ವೆಬ್ಸೈಟ್ ಮೂಲಕ ಪರಿಶೀಲಿಸಿಕೊಳ್ಳಲು ಕೋರಲಾಗಿದೆ.

