- ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದಿಂದ ಗುರುಭಿಕ್ಷಾ ಸೇವೆ
- ಅಕಾಲದಲ್ಲಿ ಸೇವಿಸಿದ ಆಹಾರ ಆರೋಗ್ಯಕ್ಕೆ ಹಾನಿಕಾರಕ
- ರುಚಿಯಿದೆ ಎಂದು ಹೆಚ್ಚು ತಿನ್ನುವುದರಿಂದ ದೇಹಕ್ಕೆ ಹಾನಿ
ಗೋಕರ್ಣ: ‘ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು’ ಎಂಬ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದರೆ ಆರೋಗ್ಯಕರ ಜೀವನ ನಡೆಸುವುದು ಸುಲಭವಾಗುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.



ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 31.07.2026ರಂದು ಆಶೀರ್ವಚನ ಅನುಗ್ರಹಿಸಿದ ಶ್ರೀಗಳು, ಆಯುರ್ವೇದದ ಮಹರ್ಷಿ ವಾಗ್ಭಟರು ಪ್ರತಿಪಾದಿಸಿರುವ ‘ಹಿತವಾದ ಆಹಾರವನ್ನು ಸೇವಿಸಿ, ಮಿತ ಪ್ರಮಾಣದಲ್ಲಿ ತಿನ್ನಿ ಮತ್ತು ಸಕಾಲದಲ್ಲಿ ಊಟ ಮಾಡಿʼ ಎಂಬ ಸರಳ ಸೂತ್ರವೇ ಆರೋಗ್ಯಕರ ಬದುಕಿನ ಆಧಾರ. ನಮ್ಮ ಶರೀರ ಬೆಲೆಬಾಳುವಂತಹದ್ದು. ದೇಹ ಕೆಡುವಂತಹ ಆಹಾರವನ್ನು ಸೇವಿಸಬಾರದು. ಮಿತಿ ಮೀರಿದ ಸೇವನೆ ಅಪಾಯಕ್ಕೆ ದಾರಿ ಎಂದು ವಿವರಿಸಿದರು.

ಪ್ರತಿಯೊಬ್ಬರೂ ಊಟ ಮಾಡುವ ಮುನ್ನ ‘ಇದು ನನಗೆ ಹಿತವೇ? ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? ಈಗ ಇದನ್ನು ತಿನ್ನಲು ಸರಿಯಾದ ಸಮಯವೇ?ʼ ಎಂಬ ಪ್ರಶ್ನೆಗಳನ್ನು ತಮ್ಮನ್ನು ತಾವು ಕೇಳಿಕೊಳ್ಳಬೇಕು. ಆಹಾರದ ಆಯ್ಕೆಗೆ ಹೆಚ್ಚಿನ ಮಹತ್ವ ನೀಡುತ್ತಾ, ಸಿಕ್ಕಿದ್ದನ್ನೆಲ್ಲ ತಿನ್ನುವ ಬದಲು ಆಯ್ಕೆ ಮಾಡಿ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ಮುಂದೆ ಎಷ್ಟೇ ರುಚಿಕರ ಆಹಾರ ಇದ್ದರೂ, ದೇಹಕ್ಕೆ ಹಿತವಾದದ್ದು ಯಾವುದು ಮತ್ತು ಬಿಡಬೇಕಾದದ್ದು ಯಾವುದು ಎಂಬ ವಿವೇಕ ಇರಬೇಕು. ಆಹಾರದ ಆಯ್ಕೆಯೇ ಉತ್ತಮ ಆರೋಗ್ಯದ ಮೊದಲ ಹೆಜ್ಜೆ ಎಂದರು.

ಆಹಾರದ ಪ್ರಮಾಣವೂ ಅಷ್ಟೇ ಮುಖ್ಯವಾಗಿದೆ. ರುಚಿಯಾಗಿದೆ ಎಂಬ ಕಾರಣಕ್ಕೆ ಅತಿಯಾಗಿ ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಮಿತಿ ಮೀರಿ ಸೇವಿಸಿದ ಆಹಾರ ಅಜೀರ್ಣ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಯಾವಾಗಲೂ ಪ್ರಮಾಣಬದ್ಧವಾಗಿ ಊಟ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಎಷ್ಟೇ ಉತ್ತಮ ಆಹಾರವಾಗಿದ್ದರೂ ಅಕಾಲದಲ್ಲಿ ಸೇವಿಸಿದರೆ ಅದು ದೇಹಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಸರಿಯಾದ ಸಮಯದಲ್ಲಿ ಸೇವಿಸಿದ ಆಹಾರ ದೇಹಕ್ಕೆ ಪೋಷಣೆ ನೀಡುತ್ತದೆ. ಆದರೆ ಸಮಯ ಮೀರಿ ಅಥವಾ ಅಸಮಯದಲ್ಲಿ ಸೇವಿಸಿದರೆ ಅದೇ ಆಹಾರ ದುಷ್ಪರಿಣಾಮ ಉಂಟುಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾನವ ದೇಹ ಅತ್ಯಂತ ಅಮೂಲ್ಯವಾದ ಸಂಪತ್ತು. ಹಣ ಕೊಟ್ಟರೂ ದೇಹದ ಯಾವುದೇ ಅಂಗವನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ದೇಹವನ್ನು ದೇವರ ಕೊಡುಗೆಯೆಂದು ಭಾವಿಸಿ, ಅದಕ್ಕೆ ಹಾನಿಯಾಗುವ ಆಹಾರ ಮತ್ತು ಅಭ್ಯಾಸಗಳಿಂದ ದೂರವಿರಬೇಕು. ‘ಹಿತವನ್ನು ತಿನ್ನಿ, ಮಿತವಾಗಿ ತಿನ್ನಿ ಮತ್ತು ಸಕಾಲದಲ್ಲಿ ತಿನ್ನಿʼ ಎಂಬ ಒಂದೇ ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಸಾಧ್ಯ ಎಂದು ವಿವರಿಸಿದರು.
ವೇ.ಮೂ. ರವೀಂದ್ರ ಕೊಡ್ಲಕೆರೆ ದಂಪತಿಗಳು ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದ ಪರವಾಗಿ ಗುರುಭಿಕ್ಷಾಸೇವೆಯನ್ನು ನೆರವೇರಿಸಿದರು. ಉಪಾಧಿವಂತ ಮಂಡಲದ ವೇ.ಮೂ. ಪರಮೇಶ್ವರ ಭಟ್ ಮಾರ್ಕಂಡೇ, ವೇ.ಮೂ.ರಮೇಶ ಪ್ರಸಾದ, ವೇ.ಮೂ. ಜಂಬೆ ಬಾಳ ಭಟ್ರು, ವೇ.ಮೂ. ಪ್ರಶಾಂತ ಹಿರೇಗಂಗೆ ಸೇರಿದಂತೆ ಉಪಾಧಿವಂತರು ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಸಂಯೋಜಕರಾದ ಅಜಿತ ಗುಡ್ಗೆ, ಶ್ರೀಕೃಷ್ಣ ಎಂ. ಶಾಸ್ತ್ರಿ, ಸೌಮ್ಯಾ ಮಧ್ಯಸ್ಥ, ಶ್ರೀವತ್ಸ ಭೀಮನಕೋಣೆ, ದಿನ ಪ್ರಧಾನರಾಗಿ ಈಶ್ವರ ಗಾಂವ್ಕರ್ ದಂಪತಿಗಳು ಉಪಸ್ಥಿತರಿದ್ದರು.
ಬಾಕ್ಸ್)))
ಹಸಿವು ನೀಗಿಸುವುದು, ದೇಹಕ್ಕೆ ಶಕ್ತಿ ನೀಡುವುದು, ಆರೋಗ್ಯ ಕಾಪಾಡುವುದು ಮತ್ತು ದೀರ್ಘಾಯುಷ್ಯ ನೀಡುವುದೇ ಆಹಾರದ ನಿಜವಾದ ಗುರಿ. ಆದರೆ ಅಸಮಯದಲ್ಲಿ ಅಥವಾ ಅತಿಯಾಗಿ ಸೇವಿಸಿದ ಆಹಾರ ಈ ಎಲ್ಲ ಉದ್ದೇಶಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. — ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

