​ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಲ್ಲ, ಅರ್ಹರಿಗೆ ಮನೆ ಬಾಗಿಲಿಗೆ ಸೇವೆ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

​ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಲ್ಲ, ಅರ್ಹರಿಗೆ ಮನೆ ಬಾಗಿಲಿಗೆ ಸೇವೆ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

​ಬೆಂಗಳೂರು: “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಯಾವುದೇ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವುದೇ ನಮ್ಮ ಗುರಿ,” ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ.​

ಗುರುವಾರ ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಪರಿಶೀಲನೆ ಹಾಗೂ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಹಿನ್ನೆಲೆಯಲ್ಲಿ ನಾಗರಿಕರ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದರು.

ಸಿಎಜಿ ವರದಿಯಲ್ಲಿನ ಲೋಪದೋಷಗಳ ತಿದ್ದುಪಡಿ:​ಗ್ಯಾರಂಟಿ ಯೋಜನೆಗಳ ದುರುಪಯೋಗ ತಡೆಯಲು ಸರ್ಕಾರ ಪರಿಶೀಲನೆ ನಡೆಸುತ್ತಿರುವುದನ್ನು ಒಪ್ಪಿಕೊಂಡ ಡಿ.ಕೆ. ಶಿವಕುಮಾರ್, ಸಿಎಜಿ (CAG) ವರದಿಯಲ್ಲಿ ಕೆಲವು ಲೋಪದೋಷಗಳು ಕಂಡುಬಂದಿವೆ ಎಂದು ವಿವರಿಸಿದರು.

  • ಒಂದೇ ಫೋನ್ ನಂಬರ್‌ಗೆ ಹಲವು ಬ್ಯಾಂಕ್ ಖಾತೆಗಳು ಲಿಂಕ್ ಆಗಿರುವುದು ಪತ್ತೆಯಾಗಿದೆ.​
  • ಒಬ್ಬನೇ ವ್ಯಕ್ತಿಯ 5 ರಿಂದ 10 ಬೇರೆ ಬೇರೆ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಬೆಳಕಿಗೆ ಬಂದಿದೆ.​
  • ಫಲಾನುಭವಿಗಳು ಮರಣ ಹೊಂದಿದ ನಂತರವೂ ಸುಮಾರು 100 ಕೋಟಿಗೂ ಅಧಿಕ ಹಣ ವರ್ಗಾವಣೆಯಾಗಿರುವ ಮಾಹಿತಿ ಸಿಕ್ಕಿದೆ.

​”ಈ ಎಲ್ಲ ತಪ್ಪುಗಳನ್ನು ಸರಿಪಡಿಸಲು ನಾವು ವೆರಿಫಿಕೇಶನ್ ಮಾಡುತ್ತಿದ್ದೇವೆ. ಮರಣ ಹೊಂದಿದವರ ಖಾತೆಗಳಿಗೆ ಹೋಗುವ ಹಣವನ್ನು ನಿಲ್ಲಿಸಿ, ಹೊಸದಾಗಿ ಮಾಹಿತಿ ನೀಡುವಂತೆ ಸೂಚಿಸಲಾಗುವುದು. ಆದರೆ ಅರ್ಹರಿಗೆ ಯಾವುದೇ ತೊಂದರೆಯಾಗುವುದಿಲ್ಲ,” ಎಂದು ಅವರು ಭರವಸೆ ನೀಡಿದರು.

ಗೃಹಜ್ಯೋತಿ, ಗೃಹಲಕ್ಷ್ಮಿ ನವೀಕರಣ ಕಡ್ಡಾಯ:​ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಪ್ರಯೋಜನ ಪಡೆಯುತ್ತಿರುವವರು ಇನ್ಮುಂದೆ ನವೀಕರಣ ಅರ್ಜಿ ಸಲ್ಲಿಸಬೇಕಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಒಟ್ಟಾಗಿ ಕೈಗೊಂಡಿರುವ ಈ ಯೋಜನೆಗಳು ನಿರಂತರವಾಗಿ ಮುಂದುವರಿಯಲಿವೆ. ಆಡಿಟರ್‌ಗಳ ಸಲಹೆಯ ಮೇರೆಗೆ ಕೇವಲ ಪರಿಶೀಲನೆ ಮತ್ತು ನವೀಕರಣ ಪ್ರಕ್ರಿಯೆ ನಡೆಯುತ್ತಿದೆ ಅಷ್ಟೆ ಎಂದು ಸ್ಪಷ್ಟಪಡಿಸಿದರು.

ಮನೆ ಬಾಗಿಲಿಗೇ ವಾಸಸ್ಥಳ ಪ್ರಮಾಣಪತ್ರ, ಹೆಲ್ಪ್ ಡೆಸ್ಕ್ ಸ್ಥಾಪನೆ:​ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಅಗತ್ಯವಿರುವ 10 ವರ್ಷಗಳ ವಾಸಸ್ಥಳ ಪ್ರಮಾಣಪತ್ರವನ್ನು ಸಾರ್ವಜನಿಕರ ಮನೆ ಬಾಗಿಲಿಗೇ ಉಚಿತವಾಗಿ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.​

“ನಾವು ಜನರಿಗೆ ಮತದಾನದ ಹಕ್ಕು ಹಾಗೂ ಗೌರವದಿಂದ ಬದುಕುವ ಹಕ್ಕನ್ನು ನೀಡಿದ್ದೇವೆ. ಈಗಾಗಲೇ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರ 4.5 ಲಕ್ಷ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ಸಿದ್ಧವಿದ್ದು, ಆನ್‌ಲೈನ್ ಮೂಲಕ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿಯೊಂದು ಮತಗಟ್ಟೆಯಲ್ಲೂ ಹೆಲ್ಪ್ ಡೆಸ್ಕ್ ಸ್ಥಾಪಿಸಿ ನಾಗರಿಕರ ಮತದಾನದ ಹಕ್ಕುಗಳನ್ನು ರಕ್ಷಿಸಲಾಗುವುದು.”– ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ.​

ಅರ್ಹ ಫಲಾನುಭವಿಗಳು ಯಾವುದೇ ಆತಂಕಕ್ಕೆ ಒಳಗಾಗಬೇಕಾಗಿಲ್ಲ, ಸರ್ಕಾರದ ಸೌಲಭ್ಯಗಳು ನಿರಂತರವಾಗಿ ತಲುಪಲಿವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದ್ದಾರೆ.

ರಾಜಕೀಯ ರಾಜ್ಯ