ಪದ್ಮಶ್ರೀ ಪುರಸ್ಕೃತ, ‘ತೂಗುಸೇತುವೆಗಳ ಸರದಾರ’ ಡಾ. ಗಿರೀಶ್ ಭಾರದ್ವಾಜ್ ನಿಧನ

ಪದ್ಮಶ್ರೀ ಪುರಸ್ಕೃತ, ‘ತೂಗುಸೇತುವೆಗಳ ಸರದಾರ’ ಡಾ. ಗಿರೀಶ್ ಭಾರದ್ವಾಜ್ ನಿಧನ

ಸುಳ್ಯ: ದೇಶಾದ್ಯಂತ ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಇಂದು ಮುಂಜಾನೆ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ನಿಧನರಾದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯದ ವಿವಿಧ ಭಾಗಗಳಿಂದ ಗಣ್ಯರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಡಾ. ಗಿರೀಶ್ ಭಾರದ್ವಾಜ್ ಅವರು ಚಿಕಿತ್ಸೆಗಾಗಿ ಕೆ.ವಿ.ಜಿ. ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಇದಕ್ಕೂ ಮುನ್ನ ಅವರು ಲಘು ಅನಾರೋಗ್ಯದಿಂದ ಬಳಲಿದ್ದು, ದೇವನಹಳ್ಳಿಗೆ ತೆರಳಿ ಚಿಕಿತ್ಸೆ ಪಡೆದು ಮರಳಿದ್ದರು ಎಂದು ತಿಳಿದುಬಂದಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಜನರ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಕಡಿಮೆ ವೆಚ್ಚದಲ್ಲಿ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿ ಸಾವಿರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿದ ಸಾಧನೆಗಾಗಿ ಡಾ. ಗಿರೀಶ್ ಭಾರದ್ವಾಜ್ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗಿದ್ದರು. ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಸರಳ ಜೀವನ, ಸಮಾಜಸೇವೆ ಮತ್ತು ವಿನೂತನ ಇಂಜಿನಿಯರಿಂಗ್‌ ಚಿಂತನೆಯ ಮೂಲಕ ಜನಮನ ಗೆದ್ದಿದ್ದ ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾರ್ವಜನಿಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರಾದೇಶಿಕ ರಾಜ್ಯ