ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸುಗಳೆಂಬ ಶಕ್ತಿ ಅಗತ್ಯ: ರಾಘವೇಶ್ವರ ಶ್ರೀ

ದೇಹವೆಂಬ ವಾಹನ ಚಲಿಸಲು ಮನಸ್ಸು, ಓಜಸ್ಸುಗಳೆಂಬ ಶಕ್ತಿ ಅಗತ್ಯ: ರಾಘವೇಶ್ವರ ಶ್ರೀ

  • ​’ಜಿಮ್’ ಸಂಸ್ಕೃತಿಯ ಅತಿಯಾದ ವ್ಯಾಯಾಮ ಜೀವಕ್ಕೇ ಕಂಟಕ
  • ಅತಿಯಾದ ವ್ಯಾಯಾಮದಿಂದ ಓಜಸ್ಸು ನಷ್ಟ
  • ​ಪಾರಂಪರಿಕ ಭತ್ತ ಮತ್ತು ಆಹಾರ ಬೆಳೆಗಳ ವಿನಾಶಕ್ಕೆ ರಾಘವೇಶ್ವರ ಶ್ರೀ ಬೇಸರ.

ಗೋಕರ್ಣ: ವಾಹನ ಚಲಿಸಲು ಇಂಧನ ಶಕ್ತಿ ಹಾಗೂ ಚಾಲನಾ ನಿಯಂತ್ರಣ ಬೇಕು. ಹಾಗೆಯೇ, ದೇಹವೆಂಬ ವಾಹನವು ಚಲಿಸಲು ಮನಸ್ಸು ಮತ್ತು ಓಜಸ್ಸುಗಳೆಂಬ ಶಕ್ತಿ ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ 29.08.2026 ರಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಮನಸ್ಸು ನಮ್ಮ ನಿಯಂತ್ರಣ ಶಕ್ತಿಯಾಗಿದ್ದು, ಅನ್ನದ ಸೂಕ್ಷ್ಮಾಂಶದಿಂದ ಮನಸ್ಸು ನಿರ್ಮಿತವಾಗಿದೆ ಮತ್ತು ದೇಹದ ಶಕ್ತಿ ದ್ರವವಾದ ಓಜಸ್ಸು ಕೂಡ ಅನ್ನದಿಂದಲೇ ಪೋಷಿಸಲ್ಪಟ್ಟಿದೆ. ಹೀಗೆ ದೇಹದ ನಿಯಂತ್ರಣಾ ಶಕ್ತಿ ಹಾಗೂ ಪೋಷಕ ಶಕ್ತಿಗಳೆರಡೂ ಆಹಾರವನ್ನೇ ಅವಲಂಭಿಸಿದೆ ಎಂದು ಆಹಾರದ ಮಹತ್ವವನ್ನು ವಿವರಿಸಿದರು.

ಉಪವಾಸದಿಂದ ದೇಹದ ಧಾತುಗಳು ಕ್ಷೀಣವಾಗುತ್ತದೆ ಎನ್ನಲಾಗುತ್ತದೆ. ಆದರೆ ಆತ್ಮಸಾಧನೆಯ ಕಾರಣದಿಂದ ಉಪವಾಸವಾದರೆ, ಓಜಸ್ಸು ದೇಹದಲ್ಲಿ ವೃದ್ಧಿಸುವುದರಿಂದ ದೇಹಕ್ಕೆ ಹಾನಿಯಾಗುವುದಿಲ್ಲ. ಹಾಗಾಗಿ ಆತ್ಮಸಾಧನೆಯ ಜೊತೆಗೆ ಉಪವಾಸ ಮಾಡಿದಾಗ ಊಟವಿಲ್ಲದೆಯೂ ಜೀವಿಸಬಹುದು ಎಂದು ಹೇಳಿದರು.

ಹೃದಯ ಸ್ಥಾನದಲ್ಲಿರುವ ಓಜಸ್ಸೇ ಜೀವಿಯ ಅಳಿವು ಉಳಿವಿನ ಕಾರಣವಾಗಿದೆ. ಮದ್ಯಪಾನ, ಅಸಮರ್ಪಕ ಆಹಾರ, ಅತಿಯಾದ ವ್ಯಾಯಾಮ ಮುಂತಾದವುಗಳಿಂದ ಓಜಸ್ಸು ಕ್ಷೀಣಿಸುತ್ತದೆ. ಶುದ್ಧ ಗೋಘೃತ, ಗೋಕ್ಷೀರ, ಅರವತ್ತು ದಿನಗಳಲ್ಲಿ ಬೆಳೆಯುವ ಅಕ್ಕಿ, ಕುಲಾಂತರಿಯಲ್ಲದ ಗೋಧಿ, ಹೆಸರು ಕಾಳು ಮುಂತಾದವು ಓಜಸ್ಸಿನ ವೃದ್ಧಿಗೆ ಸಹಕಾರಿ ಎಂದು ತಿಳಿಸಿದರು.

ಜೀವನಕ್ಕೆ ಬೇಕಾದ ಎಲ್ಲವನ್ನೂ ಇಂದಿನ ವ್ಯವಸ್ಥೆ ಹುಡುಕಿ ಹುಡುಕಿ ನಾಶ ಮಾಡುವ ಕಾರ್ಯ ಮಾಡುತ್ತಿದ್ದು, ಒಂದೆಡೆ ಗೋಸಂತತಿ ಕ್ಷೀಣಿಸುತ್ತಿದ್ದರೆ, ತಳಿ ಅಭಿವೃದ್ಧಿಯ ಹೆಸರಿನಲ್ಲಿ ಪಾರಂಪರಿಕ ಭತ್ತ ಹಾಗೂ ಆಹಾರ ಬೆಳೆಗಳ ವಿನಾಶ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಅವಿನಾಶ್ ಭಟ್, ಕೇಂದ್ರ ಸಾಂಬಾರು ಮಂಡಳಿಯ ಪ್ರಸನ್ನ ಕೆರೆಕೈ, ಧಾರವಾಡ ಜಿಲ್ಲಾ ರೋಟರಿ ಗವರ್ನರ್ ಗಣೇಶ್ ಭಟ್ ಉಪಸ್ಥಿತರಿದ್ದು, ಶ್ರೀಗಳ ಆಶೀರ್ವಾದ ಪಡೆದರು.

ಮಂಗಳೂರು ಹವ್ಯಕ ಮಂಡಲದ ಬಾಯಾರು, ಕೇಪು, ಕನ್ಯಾನ, ಮುಡಿಪು,ಕುಂದಾಪುರ, ಕೋಳ್ಯೂರು ವಲಯಗಳ ಪರವಾಗಿ ಮೂಡಂಬಿಕಾನ ಸುಬ್ರಹ್ಮಣ್ಯ ಭಟ್ ಕುಟುಂಬದವರು ಗುರುಭಿಕ್ಷಾಸೇವೆ ಸಮರ್ಪಿಸಿದರು. ಶ್ರೀಮಠದ ಮಾಧ್ಯಮ ಶ್ರೀಸಂಯೋಜಕ ಸಂದೇಶ ತಲಕಾಲಕೊಪ್ಪ, ರಮೇಶ ಭಟ್ ಸರವು, ಉಮೇಶ ಭಟ್ ಕೊಣಮ್ಮೆ, ಮಲ್ಲಿಕಾ ಭಟ್, ಸುಮಾ ರಮೇಶ್, ಕೃಷ್ಣಪ್ರಮೋದ, ದಿನಪ್ರಧಾನರಾದ ಶ್ರೀಕಾಂತ ಕಾಳಮಂಜಿ ದಂಪತಿಗಳು ಉಪಸ್ಥಿತರಿದ್ದರು.

ಬಾಕ್ಸ್)))

ಇಂದು ‘ಜಿಮ್’ ಸಂಸ್ಕೃತಿ ವ್ಯಾಪಿಸಿದ್ದು, ವಿಪರೀತವಾದ ವ್ಯಾಯಾಮವನ್ನು ಮಾಡುವ ಪ್ರವೃತ್ತಿ ಬೆಳೆಯುತ್ತಿದೆ. ವ್ಯಾಯಾಮವನ್ನು ಕ್ರಮವಾಗಿ ಮಾಡದೇ, ಒಮ್ಮೆಲೇ ವಿಪರೀತ ಶ್ರಮವನ್ನು ಹಾಕಿದಾಗ ಹೃದಯಾಘಾತ ದಿಂದ ಸಾವನ್ನಪ್ಪುತ್ತಾರೆ ಎಂದು ಅಧುನಿಕ ಪರಿಭಾಷೆಯಲ್ಲಿ ಕಾಣುತ್ತೇವೆ. ಇದನ್ನೇ ಆಯುರ್ವೇದ ಆಚಾರ್ಯರು ಹೇಳಿದ್ದು, ಅತಿಯಾದ ವ್ಯಾಯಾಮದಿಂದ ಓಜಸ್ಸು ನಷ್ಟವಾಗಿ ಸಾವನ್ನಪ್ಪುತ್ತಾರೆ ಎಂದು ಹೇಳಲಾಗಿದೆ.

— ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು

ಆಧ್ಯಾತ್ಮ ಆರೋಗ್ಯ ಮತ್ತು ಸೌಂದರ್ಯ ಧಾರ್ಮಿಕ ಪ್ರಾದೇಶಿಕ ರಾಜ್ಯ