ಸಿರಿಬಾಗಿಲು – ಎಡಕುಮೇರಿ ನಡುವೆ ಹಳಿ ಮೇಲೆ ಬಿದ್ದಿದ್ದ ಮಣ್ಣುನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದ್ದು, ಈ ಭಾಗದಲ್ಲಿ ರೈಲು ಸಂಚಾರವನ್ನು ಅಧಿಕೃತವಾಗಿ ಪುನಾರಂಭಿಸಲಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ನಿನ್ನೆ (ಆಗಸ್ಟ್ 3) ಸಾಯಂಕಾಲ 7:25 ರ ವೇಳೆಗೆ ಹಳಿಯು ರೈಲು ಸಂಚಾರಕ್ಕೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ. ಇದಾದ ನಂತರ ರೈಲು ಸಂಖ್ಯೆ 17378 ದುರಸ್ತಿಗೊಳಿಸಿದ ಮಾರ್ಗದ (Km 73/700–500) ಮೂಲಕ ಯಶಸ್ವಿಯಾಗಿ ಸಂಚರಿಸುವ ಮೂಲಕ ಈ ಮಾರ್ಗವನ್ನು ಮರುಆರಂಭಿಸಿತು.

ಮುನ್ನೆಚ್ಚರಿಕೆ ಕ್ರಮವಾಗಿ ವೇಗ ಮಿತಿ ನಿಗದಿ: ರೈಲು ಮಾರ್ಗವನ್ನು ಸರಿಪಡಿಸಲಾಗಿದ್ದರೂ, ಪ್ರಯಾಣಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಭಾಗದಲ್ಲಿ ತಾತ್ಕಾಲಿಕವಾಗಿ 10 ಕಿ.ಮೀ/ಗಂಟೆ ವೇಗದ ಮಿತಿಯನ್ನು ವಿಧಿಸಲಾಗಿದೆ. ಲೋಕೋ ಪೈಲಟ್‌ಗಳು ಹಾಗೂ ಸಿಬ್ಬಂದಿ ಅತ್ಯಂತ ಎಚ್ಚರಿಕೆಯಿಂದ ರೈಲುಗಳನ್ನು ಚಲಾಯಿಸುತ್ತಿದ್ದಾರೆ. ಜೊತೆಗೆ, ಕುಸಿತ ಪೀಡಿತ ಪ್ರದೇಶದಲ್ಲಿ ಇನ್ನುಳಿದ ಕಾಮಗಾರಿ ಮತ್ತು ದುರಸ್ತಿ ಕಾರ್ಯಗಳು ಮುಂದುವರಿದಿವೆ.
ಪ್ರಯಾಣಿಕರ ಗಮನಕ್ಕೆ: ರೈಲು ಸಂಚಾರ ವ್ಯವಸ್ಥೆಯು ಹಂತ ಹಂತವಾಗಿ ಯಥಾಸ್ಥಿತಿಗೆ ಮರಳುತ್ತಿರುವುದರಿಂದ ರೈಲುಗಳ ವೇಳಾಪಟ್ಟಿಯಲ್ಲಿ ಸಣ್ಣ ಪ್ರಮಾಣದ ವಿಳಂಬ ಉಂಟಾಗುವ ಸಾಧ್ಯತೆಯಿದೆ. ಪ್ರಯಾಣಿಕರು ಸಹಕರಿಸಬೇಕಾಗಿ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ್ ಕನಮಡಿ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

