ಕೋವಿಡ್ ಅಕ್ರಮ: ಸಿಎಂ ಸಿದ್ದರಾಮಯ್ಯಗೆ ಜಾನ್ ಮೈಕೆಲ್ ಕುನ್ಹಾ ಆಯೋಗದ ವರದಿ ಸಲ್ಲಿಕೆ

ಕೋವಿಡ್ ಅಕ್ರಮ: ಸಿಎಂ ಸಿದ್ದರಾಮಯ್ಯಗೆ ಜಾನ್ ಮೈಕೆಲ್ ಕುನ್ಹಾ ಆಯೋಗದ ವರದಿ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್-19 ಉಪಕರಣಗಳ ಖರೀದಿಯ ಅಕ್ರಮಕ್ಕೆ ಸಂಬಂಧಿಸಿದಂತೆ, ನ್ಯಾ| ಜಾನ್ ಮೈಕೆಲ್ ಕುನ್ಹಾ ತನಿಖಾ ಆಯೋಗವು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕುನ್ಹಾ ಅವರು, ಕೋವಿಡ್ ನಿರ್ವಹಣೆ ಮತ್ತು ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿನ ಅಕ್ರಮಗಳ ಕುರಿತಾದ ಸಮಗ್ರ ವರದಿಯನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

ಈ ವರದಿಯು ಮುಖ್ಯವಾಗಿ ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನಡೆದ ಖರೀದಿ ಪ್ರಕ್ರಿಯೆಗಳ ಮೇಲೆ ಬೆಳಕು ಚೆಲ್ಲಿದೆ. ಒಟ್ಟು 106 ಕೋಟಿ ರೂ. ಮೊತ್ತದ ಖರೀದಿಯ ಮೇಲೆ ತನಿಖೆ ನಡೆದಿದ್ದು, ಇದರಲ್ಲಿ ಬೆಂಗಳೂರು ನಗರವೊಂದರಲ್ಲೇ 63.8 ಕೋಟಿ ರೂ. ಮೊತ್ತದ ವ್ಯವಹಾರಗಳ ಬಗ್ಗೆ ಆಯೋಗವು ಪರಿಶೀಲಿಸಿದೆ.​

ಕೋವಿಡ್ ಸಂಕಷ್ಟದ ಸಮಯದಲ್ಲಿ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಪಿಪಿಇ ಕಿಟ್, ಮಾಸ್ಕ್ ಮತ್ತು ಇತರೆ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.

​ಈ ವರದಿಯು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆರೋಗ್ಯ ಮತ್ತು ಸೌಂದರ್ಯ ರಾಜಕೀಯ ರಾಜ್ಯ