

ನವೆಂಬರ್ 25 ರಂದು ಕೆಲವು ಕಾರಣಗಳಿಂದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಡಿಸೆಂಬರ್ 5 ರಂದು ಹಿಂಪಡೆದಿದ್ದು, ಇದೀಗ ಗ್ರಾಮ ಪಂಚಾಯತ್ ಅಧ್ಯಕ್ಷರು ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡು ನಾಲ್ವರಲ್ಲಿ ಮೂವರ ರಾಜೀನಾಮೆಯನ್ನು ಅಂಗೀಕರಿಸುವ ಮೂಲಕ ಸೇಡಿನ ರಾಜಕೀಯಕ್ಕೆ ಮುಂದಾಗಿದ್ದಾರೆಂದು ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕ ಆರೋಪಿಸಿದ್ದಾರೆ.


ನಾನು ಹಾಗೂ ಇನ್ನಿಬ್ಬರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಲಿಸ್ಸಿ ಮೊನಾಲಿಸಾ ಮತ್ತು ವಿಮಲಾ ಪ್ರಸಾದ್ ರಾಜೀನಾಮೆ ಹಿಂಪಡೆಯಲು ಡಿಸೆಂಬರ್ 5 ರಂದು ಗ್ರಾಮ ಪಂಚಾಯತ್ ಕಚೇರಿಗೆ ತೆರಳಿದ ವೇಳೆ ಅಧ್ಯಕ್ಷರು ಅಲ್ಲಿರಲಿಲ್ಲ, ಈ ಕಾರಣದಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಬಳಿ ರಾಜೀನಾಮೆ ಹಿಂಪಡೆಯುವ ಬಗ್ಗೆ ಅಧ್ಯಕ್ಷರಿಗೆ ಪತ್ರವನ್ನು ತಲುಪಿಸುವಂತೆ ತಿಳಿಸಿ ದೃಢೀಕರಣವನ್ನು ಕೂಡ ಪಡೆದಿರುತ್ತೇವೆ, ಗ್ರಾಮ ಪಂಚಾಯತ್ ನೋಂದಣಿ ಪುಸ್ತಕದಲ್ಲಿ ಇದರ ಬಗ್ಗೆ ದಾಖಲು ಕೂಡ ಮಾಡಲಾಗಿದೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಧ್ಯಕ್ಷರಿಗೆ ರಾಜೀನಾಮೆ ಹಿಂಪಡೆಯುವ ಪತ್ರವನ್ನು ಕೂಡ ತಲುಪಿಸಿರುತ್ತಾರೆ.
ಅಧಿಕಾರ ವ್ಯಾಮೋಹಿಯಾಗಿರುವ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ.ಕೆ.ಹಮೀದ್ ಅವರು ತಮಗಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದು, ಇದರ ಬಗ್ಗೆ ಸಂಬಂಧಪಟ್ಟವರಿಗೆ ಮೇಲ್ಮನವಿಯನ್ನು ಸಲ್ಲಿಸಲಾಗುವುದು ಎಂದು ಶೌವಾದ್ ಗೂನಡ್ಕ ಹೇಳಿದ್ದಾರೆ.