
ದ.ಕ ಜಿಲ್ಲಾಡಳಿತ ಹಾಗೂ ಜಿ. ಪಂ ದ.ಕ ಜಿಲ್ಲೆ ಇದರ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಕಡಬ ತಾಲೂಕು ಆಡಳಿತ ಸೌಧ, ಕಡಬ ತಾಲೂಕು ಪಂಚಾಯತ್ ಕಟ್ಟಡ ಹಾಗೂ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ಕೊಯಿಲ ಪಶು ವೈದ್ಯಕೀಯ ಕಾಲೇಜು ಕಟ್ಟಡಗಳ ಉದ್ಘಾಟನೆಯನ್ನು ಸಚಿವರಾದ ಎಸ್. ಅಂಗಾರರವರು ಮಾ.24 ರಂದು ನೆರವೇರಿಸಿದರು. 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾಲೂಕು ಆಡಳಿತ ಸೌಧವನ್ನು ಉದ್ಘಾಟಿಸಿದ ಎಸ್ ಅಂಗಾರ ಅವರು ಬಳಿಕ 4.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಡಬ ತಾಲೂಕು ಪಂಚಾಯತ್ ಕಟ್ಟಡ ಉದ್ಘಾಟಿಸಿದರು. ಕೊಯಿಲದಲ್ಲಿ 136 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪಶು ವೈದ್ಯಕೀಯ ಮಹಾವಿದ್ಯಾಲಯದ ಮೊದಲನೇ ಹಂತದ ಕಟ್ಟಡವನ್ನು ವೀಡಿಯೋಗೆ ಚಾಲನೆ ನೀಡುವ ಮೂಲಕ ಉದ್ಘಾಟಿಸಿದರು. ನಂತರ ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ವಿವಿಧ ಇಲಾಖೆಗಳ ಸವಲತ್ತುಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಪಶುವೈದ್ಯಕೀಯ ಕಾಲೇಜಿನ ಕಾರ್ಯ ಪಾಲಕ ಅಭಿಯಂತರರಾದ ದಾಮೋದರ್, ಬೀದರ್ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ.ಸಿ. ವೀರಣ್ಣ, ಬೀದರ್ ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ. ರಂಗನಾಥ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎ.ವಿ. ತೀರ್ಥರಾಮ, ದ.ಕ.ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕುಮಾರ್, ಕರ್ನಾಟಕ ಗೃಹ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ವಿಜಯ್ ಕುಮಾರ್, ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಅರುಣ್ ಕುಮಾರ್ ಶೆಟ್ಟಿ ಎನ್., ಎಚ್. ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಭರತ್ ಬಿ.ಎಂ, ಸುಳ್ಯ ತಹಶೀಲ್ದಾರರಾದ ಮಂಜುನಾಥ್, ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ, ಕಡಬ ಉಪ ತಹಶಿಲ್ದಾರ್ ಮನೋಹರ್ ಕೆ. ಟಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು.



