ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ, ರಾಜ್ಯ ಸರ್ಕಾರ ತ್ವರಿತವಾಗಿ ಕಾರ್ಯಾಚರಣೆ ಆರಂಭಿಸಿದ್ದು, ಐದು ಮಂದಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.

ದಕ್ಷ ಅಧಿಕಾರಿಯೆಂದು ಗುರುತಿಸಿಕೊಂಡಿರುವ ಪೊಲೀಸ್ ಮಹಾನಿರೀಕ್ಷಕ (IGP) ಎನ್. ಶಶಿಕುಮಾರ್ ಅವರ ಹೆಗಲಿಗೆ ಈ ಮಹತ್ವದ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿದೆ.
SIT ತಂಡದಲ್ಲಿರುವ ಪ್ರಮುಖ ಅಧಿಕಾರಿಗಳು
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಕೃತ ಆದೇಶದ ಪ್ರಕಾರ, ಶಶಿಕುಮಾರ್ ಅವರೊಂದಿಗೆ ತನಿಖೆಯಲ್ಲಿ ಕೈಜೋಡಿಸಲು ಅನುಭವಿ ಐಪಿಎಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿದೆ:
- ಎನ್. ಶಶಿಕುಮಾರ್, IPS– ಐಜಿಪಿ (SIT ಮುಖ್ಯಸ್ಥರು)
- ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, IPS– ಮಂಗಳೂರು ನಗರ ಪೊಲೀಸ್ ಆಯುಕ್ತರು
- ನಿಶಾ ಜೇಮ್ಸ್, IPS– ರಾಜ್ಯ ಗುಪ್ತವಾರ್ತೆ ಪೊಲೀಸ್ ಅಧೀಕ್ಷಕರು (SP)
- ಲೋಕೇಶ್ ಜಗಲಸಾರ್, IPS – ಸಿಐಡಿ ಪೊಲೀಸ್ ಅಧೀಕ್ಷಕರು (SP)
- ವೆಂಕಟೇಶ್ ಪ್ರಸನ್ನ– ಹೆಚ್ಚುವರಿ ಪೊಲೀಸ್ ಅಧೀಕ್ಷಕರು (ASP), ಬೆಂಗಳೂರು ಗ್ರಾಮಾಂತರ
ಈ ವಿಶೇಷ ತನಿಖಾ ತಂಡಕ್ಕೆ ರಾಜ್ಯಾದ್ಯಂತ ಕಾರ್ಯವ್ಯಾಪ್ತಿ ನೀಡಲಾಗಿದ್ದು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಅಡಿಯಲ್ಲಿ ವಿಶೇಷ ಅಧಿಕಾರ ಹಾಗೂ ಪೊಲೀಸ್ ಠಾಣೆಯ ಮಾನ್ಯತೆ ನೀಡಲಾಗಿದೆ.
ಸುಪ್ರೀಂ ಕೋರ್ಟ್ 3 ತಿಂಗಳ ಕಟ್ಟುನಿಟ್ಟಿನ ಗಡುವು
ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.ಹಿಂದಿನ ತನಿಖೆಗಳಲ್ಲಿ ಹಲವು ಪ್ರಮುಖ ಸಾಕ್ಷ್ಯಗಳನ್ನು ಕಡೆಗಣಿಸಲಾಗಿದೆ ಹಾಗೂ ನೈಜ ಆರೋಪಿಗಳನ್ನು ರಕ್ಷಿಸಲಾಗಿದೆ ಎಂದು ಕುಟುಂಬಸ್ಥರು ಆಕ್ಷೇಪಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯವು ಹೊಸದಾಗಿ ಮರುತನಿಖೆ ನಡೆಸಿ, ಮೂರು ತಿಂಗಳ ಕಾಲಮಿತಿಯೊಳಗೆ ಸಮಗ್ರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಗಡುವು ವಿಧಿಸಿದೆ.
ಪ್ರಕರಣದ ಹಿನ್ನೆಲೆ
2012ರ ಅಕ್ಟೋಬರ್‌ನಲ್ಲಿ ಉಜಿರೆಯ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು.ಸ್ಥಳೀಯ ಪೊಲೀಸರ ನಂತರ ಪ್ರಕರಣ ಸಿಐಡಿ ಹಾಗೂ ಸಿಬಿಐ ಕೈಗೆ ಹೋದರೂ ನೈಜ ಅಪರಾಧಿಗಳು ಪತ್ತೆಯಾಗಿರಲಿಲ್ಲ.ಈ ಕೇಸ್‌ನಲ್ಲಿ ಬಂಧಿತನಾಗಿದ್ದ ಸಂತೋಷ್ ರಾವ್‌ನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ 2023ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು.
ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ರಚನೆಯಾಗಿರುವ ಐಪಿಎಸ್ ಅಧಿಕಾರಿ ಶಶಿಕುಮಾರ್ ನೇತೃತ್ವದ ನೂತನ SIT ತಂಡವು 14 ವರ್ಷಗಳ ಹಳೆಯ ಈ ನಿಗೂಢ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಿ, ನೈಜ ಅಪರಾಧಿಗಳಿಗೆ ಶಿಕ್ಷೆ ಕೊಡಿಸುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಸಾರ್ವಜನಿಕರಿದ್ದಾರೆ.

