ಕಾರ್ಕಳ / ಮಂಗಳೂರು:(ಸೆ.20) ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ರಮಾನಾಥ್ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆ ರವಿವಾರ ಮಧ್ಯಾಹ್ನ ಕಾರ್ಕಳ-ಮೂಡುಬಿದಿರೆ ರಸ್ತೆಯ ಸಾಣೂರು ಗ್ರಾಮದ ಬಳಿ ಸಂಭವಿಸಿದೆ. ಘಟನೆಯಲ್ಲಿ ರಮಾನಾಥ್ ರೈ ಅವರು ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅವರ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿವೆ.

ಘಟನೆಯ ವಿವರ:ರವಿವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ರಮಾನಾಥ್ ರೈ ಅವರು ತಮ್ಮ ಇನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಸಾಣೂರು ಗ್ರಾಮದ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಬಂದ ಖಾಸಗಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರು ನೀಡಿರುವ ಮಾಹಿತಿಯಂತೆ, ಅಪಘಾತದ ಸಮಯದಲ್ಲಿ ಕಾರಿನಲ್ಲಿ ರಮಾನಾಥ್ ರೈ ಅವರೊಂದಿಗೆ ಚಾಲಕ, ಗನ್‌ಮ್ಯಾನ್ ಹಾಗೂ ಇಬ್ಬರು ಆಪ್ತ ಸಹಾಯಕರು ಪ್ರಯಾಣಿಸುತ್ತಿದ್ದರು. ರಮಾನಾಥ್ ರೈ ಸೇರಿದಂತೆ ಕಾರಿನಲ್ಲಿದ್ದ ಇತರರು ಯಾವುದೇ ಪ್ರಾಣಾಪಾಯವಿಲ್ಲದೆ ಸುರಕ್ಷಿತವಾಗಿದ್ದಾರೆ.

ಅಪಘಾತದ ತಕ್ಷಣವೇ ಗಾಯಾಳುಗಳನ್ನು ಕಾರ್ಕಳದ ಟಿ.ಎಮ್.ಎ ಪೈ ರೋಟರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಯಾಗಿ ಮಂಗಳೂರಿನ ಯೇನೆಪೋಯ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

