ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಹೊಗೆಯಾಡತೊಡಗಿದೆ. ಗಾಂಧಿನಗರ ಕ್ಷೇತ್ರದ ಆರು ಬಾರಿಯ ಶಾಸಕ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ತಮ್ಮನ್ನು ಸಚಿವ ಸಂಪುಟದಿಂದ ಹಠಾತ್ತನೆ ಕೈಬಿಟ್ಟಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದ ನಾಯಕತ್ವಕ್ಕೆ ನೇರ ಪ್ರಶ್ನೆಗಳನ್ನು ಎಸೆದಿದ್ದಾರೆ.

”ನನ್ನನ್ನು ಕೈಬಿಡಲು ಕಾರಣವೇನು?” – ದಿನೇಶ್ ಗುಂಡೂರಾವ್ ಪ್ರಶ್ನೆ ಸುದ್ದಿಸಂಸ್ಥೆ ‘ಎಎನ್‌ಐ’ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್, “ನನ್ನನ್ನು ಸಂಪುಟದಿಂದ ಏಕಾಏಕಿ ಹೊರಗಿಟ್ಟಿರುವುದಕ್ಕಿಂತ, ಅದಕ್ಕೆ ಯಾವುದೇ ಸೂಕ್ತ ಕಾರಣ ನೀಡದಿರುವುದು ನನಗೆ ಹೆಚ್ಚು ಬೇಸರ ತಂದಿದೆ. ನಾನು ಸಚಿವನಾಗಿ ಕೆಟ್ಟದಾಗಿ ಕಾರ್ಯನಿರ್ವಹಿಸಿದ್ದೇನೆಯೇ? ನನ್ನ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿವೆಯೇ? ಅಥವಾ ನಾನು ಪಕ್ಷಕ್ಕಾಗಿ ಸರಿಯಾಗಿ ಕೆಲಸ ಮಾಡಿಲ್ಲವೇ? ಕಾಂಗ್ರೆಸ್ ಪಕ್ಷಕ್ಕೆ ನಾನು ಯಾವಾಗಲೂ ನಿಷ್ಠಾವಂತನಾಗಿದ್ದೇನೆ ಮತ್ತು ನೀಡಿರುವ ಎಲ್ಲಾ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ” ಎಂದು ಬೇಸರ ಹೊರಹಾಕಿದ್ದಾರೆ.
ಮುಂದುವರಿದು ಮಾತನಾಡಿದ ಅವರು, “ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲೂ ಮೂರು ವರ್ಷಗಳ ಕಾಲ ಪಕ್ಷದ ಸಂಘಟನೆಗಾಗಿ ನಾನು ಸ್ವಯಂಪ್ರೇರಿತನಾಗಿ ಸಚಿವ ಸ್ಥಾನವನ್ನು ತ್ಯಾಗ ಮಾಡಿದ್ದೆ. ಸಚಿವ ಸ್ಥಾನವೊಂದೇ ನನ್ನ ಅಂತಿಮ ಗುರಿಯಲ್ಲ. ಆದರೆ ಇಷ್ಟೊಂದು ವರ್ಷಗಳ ಸೇವೆಯ ನಂತರ ಕನಿಷ್ಠ ಪಕ್ಷಕ್ಕೆ ಕಾರಣವನ್ನಾದರೂ ತಿಳಿಸಬೇಕಿತ್ತು. ಭವಿಷ್ಯದಲ್ಲಾದರೂ ನನಗೆ ಸೂಕ್ತ ವಿವರಣೆ ನೀಡುತ್ತಾರೆ ಎಂಬ ಭರವಸೆ ಇದೆ” ಎಂದಿದ್ದಾರೆ.
ಹಿರಿಯ ನಾಯಕರ ಅಸಮಾಧಾನ ಶಮನಗೊಳಿಸಲು ಮನವಿಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಚಿವರಿಗೆ ಶುಭಾಶಯ ಕೋರಿದ ದಿನೇಶ್ ಗುಂಡೂರಾವ್, ಅದೇ ವೇಳೆ ಅವಕಾಶ ಸಿಗದ ಹಿರಿಯ ನಾಯಕರ ಬೇಸರವನ್ನು ಆಲಿಸುವಂತೆ ಪಕ್ಷದ ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ.

