2027ರಲ್ಲಿ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭ: ಶಾಸಕ ಅಶೋಕ್ ಕುಮಾರ್ ರೈ ಘೋಷಣೆ

2027ರಲ್ಲಿ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭ: ಶಾಸಕ ಅಶೋಕ್ ಕುಮಾರ್ ರೈ ಘೋಷಣೆ

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರ ನಿರಂತರ ಶ್ರಮದ ಫಲವಾಗಿ ಪುತ್ತೂರಿನಲ್ಲಿ ನೂತನ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಅಧಿಕೃತ ಹಸಿರು ನಿಶಾನೆ ಸಿಕ್ಕಿದೆ. 2027ರ ಶೈಕ್ಷಣಿಕ ವರ್ಷದಿಂದಲೇ ನೂತನ ಮೆಡಿಕಲ್ ಕಾಲೇಜು ಕಾರ್ಯಾಚರಣೆ ಆರಂಭಿಸಲು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಒಪ್ಪಿಗೆ ನೀಡಿದ್ದಾರೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಈಗಾಗಲೇ ಅಗತ್ಯ ಬೈಲಾ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮುಂದಿನ ಹಂತದ ಕಾರ್ಯಚಟುವಟಿಕೆಗಳು ವೇಗ ಪಡೆದುಕೊಂಡಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

​ಆರಂಭಿಕ ಹಂತದಲ್ಲಿ ಮೆಡಿಕಲ್ ಕಾಲೇಜನ್ನು ನಗರದ ಹಳೆ ನ್ಯಾಯಾಲಯದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಲಾಗುತ್ತಿದ್ದು, ಮುಂಬರುವ 2027ರ ಶೈಕ್ಷಣಿಕ ವರ್ಷದಿಂದ 50 ವೈದ್ಯಕೀಯ ವಿದ್ಯಾರ್ಥಿಗಳ ಮೊದಲ ಬ್ಯಾಚ್ ಸೇರ್ಪಡೆಯೊಂದಿಗೆ ತರಗತಿಗಳು ಶುರುವಾಗಲಿವೆ. ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ತುರ್ತು ಚಿಕಿತ್ಸಾ ಸೌಕರ್ಯಕ್ಕಾಗಿ ಹಾಲಿ ಸರ್ಕಾರಿ ಆಸ್ಪತ್ರೆಯ ಪಕ್ಕದಲ್ಲೇ 120 ಹಾಸಿಗೆಗಳ ಹೆಚ್ಚುವರಿ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.

​ಈ ಬೃಹತ್ ಮೆಡಿಕಲ್ ಕಾಲೇಜು ಹಾಗೂ ಸಂಬಂಧಿತ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಒಟ್ಟು ₹750 ಕೋಟಿ ವೆಚ್ಚದ ಯೋಜನಾ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಬೇಕಾಗುವ 120 ಹಾಸಿಗೆಗಳ ಹೊಸ ಆಸ್ಪತ್ರೆ ಕಟ್ಟಡ ಹಾಗೂ ತಾಂತ್ರಿಕ ಉಪಕರಣಗಳಿಗಾಗಿ ₹20 ಕೋಟಿ ಅನುದಾನಕ್ಕೆ ಪ್ರತ್ಯೇಕ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವೇ ಅನುಮೋದನೆ ಸಿಗುವ ನಿರೀಕ್ಷೆಯಿದೆ.

​ಕಾಲೇಜಿನ ಶಾಶ್ವತ ನೆಲೆಗಾಗಿ ಸೇಡಿಯಾಪುವಿನಲ್ಲಿ ಬೃಹತ್ ಕ್ಯಾಂಪಸ್ ನಿರ್ಮಾಣಗೊಳ್ಳಲಿದ್ದು, 2ನೇ ಬ್ಯಾಚ್ ವೇಳೆಗೆ ಅಂದರೆ 2028ರಲ್ಲಿ ಕಾಲೇಜು ಮತ್ತು ಆಸ್ಪತ್ರೆಯನ್ನು ಅಲ್ಲಿನ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಈ ನೂತನ ಕ್ಯಾಂಪಸ್ ಬರಿ ಮೆಡಿಕಲ್ ಕಾಲೇಜಿಗೆ ಮಾತ್ರ ಸೀಮಿತವಾಗಿರದೆ, ಫಿಸಿಯೋಥೆರಪಿ ಮತ್ತು ನರ್ಸಿಂಗ್ ಕಾಲೇಜುಗಳನ್ನು ಒಳಗೊಂಡ ಸಮಗ್ರ ವೈದ್ಯಕೀಯ ಶಿಕ್ಷಣ ಸಂಕೀರ್ಣವಾಗಿ ಹೊರಹೊಮ್ಮಲಿದೆ. ಇದಕ್ಕಾಗಿ ಅಗತ್ಯವಿರುವ ಮಾಸ್ಟರ್‌ಪ್ಲಾನ್ (Master Plan) ಈಗಾಗಲೇ ಸಿದ್ಧಗೊಂಡಿದೆ.

​ಪುತ್ತೂರು ಭಾಗದ ಜನರ ದಶಕಗಳ ಕನಸು ನನಸಾಗುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಶಾಸಕರು, ಈ ಯೋಜನೆಯಿಂದ ಗ್ರಾಮೀಣ ಭಾಗದ ಜನರಿಗೆ ಉಚಿತ ಹಾಗೂ ಸುಸಜ್ಜಿತ ಉನ್ನತ ಆರೋಗ್ಯ ಸೇವೆ ಲಭ್ಯವಾಗಲಿದೆ ಎಂದರು. ಅಷ್ಟೇ ಅಲ್ಲದೆ, ಸ್ಥಳೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ, ನರ್ಸಿಂಗ್ ಮತ್ತು ಅರೆ-ವೈದ್ಯಕೀಯ ಶೈಕ್ಷಣಿಕ ಕೋರ್ಸ್‌ಗಳನ್ನು ಕಲಿಯಲು ಸ್ವಕ್ಷೇತ್ರದಲ್ಲೇ ಅವಕಾಶ ಸಿಗಲಿದ್ದು, ಶೈಕ್ಷಣಿಕ ಮತ್ತು ಆರ್ಥಿಕ ರಂಗದಲ್ಲಿ ಪುತ್ತೂರು ಪ್ರಮುಖ ಕೇಂದ್ರವಾಗಿ ಬೆಳೆಯಲಿದೆ

ಆರೋಗ್ಯ ಮತ್ತು ಸೌಂದರ್ಯ ರಾಜಕೀಯ ರಾಜ್ಯ ಶೈಕ್ಷಣಿಕ