ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಮಚಂದ್ರಾಪುರ ಶ್ರೀ

ಸಮಾಜಕ್ಕೆ ಸರಿದಾರಿಯನ್ನು ತೋರುವುದು ಗುರುವಿನ ಕಾರ್ಯ : ರಾಮಚಂದ್ರಾಪುರ ಶ್ರೀ

  • ವ್ಯಾಸಪೂಜೆಯ ಮೂಲಕ ಗೋಕರ್ಣ ಮಂಡಲಾಚಾರ್ಯರ ೩೩ನೇ ವರ್ಷದ ಚಾತುರ್ಮಾಸ್ಯ ವ್ರತದೀಕ್ಷೆ.
  • ಶಂಕರರು ಸೈನ್ಯ -ಸಂಪತ್ತುಗಳಿಲ್ಲದೇ ಧರ್ಮಸಂರಕ್ಷಿಸಿದರು.
  • ಸರಿ ವಿಚಾರ ತಿಳಿಸುವವರಿಗೆ ಶತೃಗಳು ಸಹಜ

ಗೋಕರ್ಣ : ಸರಿಯನ್ನು ಬಲ್ಲವನು ಕೇವಲ ಜ್ಞಾನಿ. ಸರಿಯನ್ನು ಬಲ್ಲವನು ಹಾಗೂ ಸರಿಯಾದ ದಾರಿಯನ್ನು ಇತರರಿಗೆ ತೋರುವವನು ಗುರು. ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಬೇಕಾದ ಕಾರ್ಯ ಗುರುವಿನದ್ದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ೨೯.೦೭.೨೦೨೬ ರಂದು ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಆಶೀರ್ವಚನ ಅನುಗ್ರಹಿಸಿದ ಶ್ರೀಗಳು, ಶಂಕರಾಚಾರ್ಯರು ಸೈನ್ಯ ಹಾಗೂ ಸಂಪತ್ತು ಯಾವುದೂ ಇಲ್ಲದೇ ದೇಶದಲ್ಲಿ ಧರ್ಮಸಂರಕ್ಷಣೆಯ ಕಾರ್ಯವನ್ನು ಮಾಡಿದರು. ದೇಶಾದ್ಯಂತ ಸಂಚರಿಸಿದ ಶಂಕರರು ಜನರಿಗೆ ಸರಿಯಾದ ದಾರಿಯನ್ನು ತೋರಿದರು ಹಾಗೂ ನಿತ್ಯನಿರಂತರವಾಗಿ ಆ ಕಾರ್ಯ ನಡೆಯುವಂತೆ ಮಾಡಲು ದೇಶಾದ್ಯಂತ ಮಠಗಳನ್ನು ಸ್ಥಾಪಿಸಿದರು. ಹಾಗಾಗಿ ಶಂಕರಾಚಾರ್ಯರ ಉದ್ದೇಶವೇ ಮಠದ ಉದ್ದೇಶವಾಗಿರಬೇಕು. ಶಂಕರರು ತೋರಿದ ದಾರಿಯಲ್ಲಿ ಧರ್ಮ ಪ್ರಸಾರವನ್ನು ಮಾಡುತ್ತಾ, ಸಮಾಜಕ್ಕೆ ಸರಿ – ತಪ್ಪುಗಳನ್ನು ಮಾರ್ಗದರ್ಶನ ಮಾಡುವುದು ಮಠದ ಕಾರ್ಯವಾಗಬೇಕು. ನಮ್ಮ ಮಠದ ಉದ್ದೇಶ ಹಾಗೂ ಈ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಉದ್ದೇಶವೂ ಇದೇ ಆಗಿದೆ. ಜೀವನಕ್ಕೆ ಸರಿಯಾದ ದಾರಿಯನ್ನು ತೋರುವುದು ಹಾಗೂ ಸಮಾಜದಲ್ಲಿನ ತಪ್ಪುಗಳನ್ನು ತಿದ್ದುವುದು ಮಠದ ಕಾರ್ಯ ಎಂದು ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಉದ್ದೇಶವನ್ನು ತಿಳಿಸಿದರು.

ಸಮಾಜಕ್ಕೆ ಸರಿಯಾದ ವಿಚಾರ ತಿಳಿಸುವವರಿಗೆ ಶತೃಗಳು ಹುಟ್ಟಿಕೊಳ್ಳುವುದು ಪ್ರಕೃತಿ ಸಹಜ. ಸರಿದಾರಿಯಲ್ಲಿ ನಡೆಯುವವರು ಅವುಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ರಾಮ – ಕೃಷ್ಣರಿಂದ ಆರಂಭಿಸಿ, ಎಲ್ಲಾ ಮಹಾತ್ಮರ ಜೀವನದಲ್ಲೂ ಕಾಣಬಹುದು.ಕಳೆದ ವರ್ಷ ಮಾತು ಅಥವಾ ಭಾಷೆಗೆ ಸಂಬಂಧಿಸಿದ ‘ಸ್ವಭಾಷಾ ಚಾತುರ್ಮಾಸ್ಯ’ ಮಾಡಲಾಗಿತ್ತು ಹಾಗೂ ಈ ವರ್ಷ ತಿನ್ನುವ ಆಹಾರಕ್ಕೆ ಸಂಬಂಧಿಸಿದ ‘ಅನ್ನಬ್ರಹ್ಮ ಚಾತುರ್ಮಾಸ್ಯ’ ಆಚರಿಸಲಾಗುತ್ತಿದೆ. ಹೀಗೆ ಈ ವರ್ಷ ಹಾಗೂ ಕಳೆದ ವರ್ಷದ ಚಾತುರ್ಮಾಸ್ಯಗಳೆರಡೂ ನಾಲಿಗೆಗೆ ಸಂಬಂಧಿಸಿದ್ದಾಗಿದೆ. ನಾಲಿಗೆಗೆ ಸಂಬಂಧಿಸಿದ ತಪ್ಪುಗಳನ್ನು ತಿದ್ದುವ ಕಾರ್ಯ ಇದಾಗಿದೆ ಎಂದರು.

ಇಂದು ಗೌಣವಾದ ವಿಚಾರಗಳು ಮುಖ್ಯವಾಗುತ್ತಿದೆ. ಮುಖ್ಯ ವಿಚಾರಗಳು ಗೌಣವಾಗುತ್ತಿದೆ. ಇದು ಈ ಕಾಲದ ದುರಂತ ಎಂದ ಶ್ರೀಗಳು, ಇಂದು ನಾವು ಏನನ್ನು ತಿನ್ನುತ್ತಿದ್ದೇವೆ? ಹೇಗೆ ತಿನ್ನುತ್ತಿದ್ದೇವೇ? ಆಹಾರವನ್ನು ಹೇಗೆ ತಯಾರಿಸಲಾಗಿದೆ? ಎಂಬ ಕುರಿತು ಆಲೋಚಿಸದೇ ಕೇವಲ ತುತ್ತಿನ ಚೀಲವನ್ನು ತುಂಬಿಸುವ ಕಾರ್ಯ ಮಾಡುತ್ತಿದ್ದೇವೆ. ಇಂದು ಆಹಾರದ ಕುರಿತಾಗಿ ಸಮರ್ಪಕವಾದ ಮಾಹಿತಿಯನ್ನು ಶಾಲೆಯಲ್ಲಗಲಿ, ವಿಶ್ವವಿದ್ಯಾಲಯಗಳಾಗಲಿ ತಿಳಿಸಿಕೊಡುತ್ತಿಲ್ಲ. ನಾವು ಏನನ್ನು ತಿನ್ನುತ್ತೇವೋ ಅದೇ ನಾವಾಗುತ್ತೇವೆ. ಹಾಗಾಗಿ ನಾವೇ ಆಹಾರದ ಕುರಿತಾದ ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿಸಲು ಮುಂದಾಗಿದ್ದೇವೆ ಎಂದರು.

ಇದಕ್ಕೂ ಮೊದಲು ಬೆಳಗ್ಗೆ, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ತಮ್ಮ ೩೩ನೇ ಚಾತುರ್ಮಾಸ್ಯವ್ರತವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ವ್ಯಾಸಪೂಜೆಯನ್ನು ಕೈಗೊಳ್ಳುವಮೂಲಕ ವಿಧ್ಯುಕ್ತವಾಗಿ ಆರಂಭಿಸಿದರು. ಶ್ರೀರಾಮಾದಿ ದೇವರ ಪೂಜೆಯನ್ನು ಮಾಡಿ, ನಿಂಬೆಹಣ್ಣಿನಲ್ಲಿ ಕೃಷ್ಣಾದಿ ದೇವತೆಗಳು ಹಾಗೂ ವ್ಯಾಸಾದಿ ಋಷಿಗಳನ್ನು ಆವಾಹನೆಮಾಡಿ, ಮಠೀಯ ಪದ್ಧತಿಯಂತೆ ಪೂಜಿಸುವುದರ ಮೂಲಕ ವ್ಯಾಸಪೂಜೆ ಸಂಪನ್ನವಾಯಿತು. ಮುಗಳಿ ತಿರುಮಲೇಶ್ವರ ಭಟ್ ಅವರು ಸರ್ವಸೇವೆ ಸಮರ್ಪಿಸಿದರೆ, ಮಂಜುನಾಥ ಸುವರ್ಣಗದ್ದೆ ದಂಪತಿಗಳು ಸಭಾಪೂಜೆ ಸಲ್ಲಿಸಿದರು. ಮಾತೃ ವಿಭಾಗದ ದೇವಿಕಾ ಶಾಸ್ತ್ರಿ ಪ್ರಸ್ತಾವನೆ ಮಾಡಿದರೆ, ಜಿ.ಎಸ್ ಹೆಗಡೆ ದಂಪತಿಗಳು ದಿನ ಪ್ರಧಾನರಾಗಿ ಮೇಲುಸ್ತುವಾರಿ ಮಾಡಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಕಾರ್ಯದರ್ಶಿ ಕೆ.ಪಿ. ಎಡಪ್ಪಾಡಿ, ಹವ್ಯಕ ಮಹಾಮಂಡಲದ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪು, ಕಾರ್ಯದರ್ಶಿ ಮಹೇಶ್ ಚಟ್ನಳ್ಳಿ, ಚಾತುರ್ಮಾಸ್ಯದ ಪ್ರಧಾನ ಸಂಯೋಜಕ ಚಂದನ್ ಶಾಸ್ತ್ರಿ, ಶಾಸನತಂತ್ರ ಹಾಗೂ ಎಲ್ಲಾ ಮಂಡಲಗಳ ಪದಾಧಿಕಾರಿಗಳು, ಚಾತುರ್ಮಾಸ್ಯದ ನಿರ್ವಾಹಕರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳ ವಿವಿಧ ಭಾಗಗಳ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ವ್ಯಾಸಮಂತ್ರಾಕ್ಷತೆ ಸ್ವೀಕರಿಸಿದರು.

~~~

ಗುರು ಶಿಷ್ಯರ ಅನ್ನೋನ್ಯ ಸಂಬಧದ ಪ್ರತೀಕವಾದ ಚಾತುರ್ಮಾಸ್ಯ ವ್ರತಸಂಕಲ್ಪ :

ವ್ಯಾಸಪೂಜೆಯ ನಂತರ, ಮಠೀಯ ಪದ್ಧತಿಯಂತೆ ‘ಗರುಡಾಸನ’ದಲ್ಲಿ ಕುಳಿತ ಶ್ರೀಗಳು ” ವರ್ಷಾಕಾಲದ ನಾಲ್ಕು ಪಕ್ಷಗಳ ಕಾಲದ ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿದ್ದು, ಸಕಲ ಜೀವಿಗಳಿಗೂ ಯಾವುದೇ ತೊಂದರೆ ಇಲ್ಲದಿದ್ದರೆ, ನಾವು ಇಲ್ಲಿಯೇ ವ್ರತದೀಕ್ಷೆಯನ್ನು ಕೈಗೊಳ್ಳುತ್ತೇವೆ” ಎಂದು ಹೇಳಿದರು. ಇದಕ್ಕೆ ಪ್ರತಿಸ್ಪಂದನೆಯಾಗಿ ಸಮಸ್ತ ಶಿಷ್ಯಸ್ತೋಮದ ಒಳಿತನ್ನು ಬಯಸಿ, ಪೂಜ್ಯ ಶ್ರೀಗಳು ಚಾತುರ್ಮಾಸ್ಯವ್ರತವನ್ನು ಕೈಗೊಳ್ಳುತ್ತಿರುವುದು ನಮ್ಮೆಲ್ಲರ ಸೌಭಾಗ್ಯವೇ ಆಗಿದೆ. ನಿತ್ಯಾನುಷ್ಠಾನಗಳಿಗೆ ಯಥಾವಿಹಿತವಾದ ಸೌಕರ್ಯವನ್ನು ನಮ್ಮಿಂದ ಪೂಜ್ಯರು ಪಡೆದುಕೊಂಡು, ನಮ್ಮೆಲ್ಲರನ್ನೂ ಹರಸಬೇಕು” ಎಂದು ಶಿಷ್ಯವೃಂದ ಶ್ರೀಗಳಲ್ಲಿ ಭಿನ್ನವಿಸಿಕೊಂಡ ಮನೋಜ್ಞ ಸನ್ನಿವೇಶ ಗುರು ಶಿಷ್ಯರ ಅನ್ನೋ ಸಂಬಂಧದ ದ್ಯೋತಕವಾಯಿತು.

~~~~~~

ಸಂದೇಶ ತಲಕಾಲಕೊಪ್ಪ
ಶ್ರೀಸಂಯೋಜಕ – ಮಾಧ್ಯಮ
ಶ್ರೀರಾಮಚಂದ್ರಾಪುರ ಮಠ
8970228945

ಆಧ್ಯಾತ್ಮ ಧಾರ್ಮಿಕ