ಮಂಗಳೂರು : ಯಾವುದೇ ಸಿಂಧುತ್ವರೂಪದ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಿ, ಮಂಗಳೂರಿನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಂದಿ ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ನಗರದ ಹೊರವಲಯದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ವಿಶ್ವಾಸಾರ್ಹ ಮಾಹಿತಿ ಹಾಗೂ ಖಚಿತ ಇಂಟೆಲಿಜೆನ್ಸ್ ಮಾಹಿತಿ ಆಧಾರದ ಮೇಲೆ ಜುಲೈ 9 ರಂದು ಸುರತ್ಕಲ್ ವ್ಯಾಪ್ತಿಯ ನಿರ್ಮಾಣ ಹಂತದ ಬೃಹತ್ ಕಟ್ಟಡವೊಂದರ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 54 ಕಾರ್ಮಿಕರ ಗುರುತಿನ ಚೀಟಿ ಹಾಗೂ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಯಿತು.
ದಾಖಲೆಗಳ ತೀವ್ರ ಪರಿಶೀಲನೆಯ ಸಂದರ್ಭದಲ್ಲಿ ಎಂಟು ಮಂದಿ ಕಾರ್ಮಿಕರು ಯಾವುದೇ ಅಧಿಕೃತ ವೀಸಾ ಅಥವಾ ಪಾಸ್‌ಪೋರ್ಟ್ ಹೊಂದಿಲ್ಲದೆ, ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವುದು ಪತ್ತೆಯಾಗಿದೆ. ಇವರೆಲ್ಲರೂ ಬಾಂಗ್ಲಾದೇಶದ ಮೂಲದವರು ಎಂದು ಪೊಲೀಸರು ಖಚಿತಪಡಿಸಿದ್ದಾರೆ.
“ಸುರತ್ಕಲ್ ವ್ಯಾಪ್ತಿಯಲ್ಲಿ ನಡೆದ ಈ ಜಂಟಿ ಕಾರ್ಯಾಚರಣೆಯಲ್ಲಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಗಿದೆ. ಬಂಧಿತ ಎಂಟು ಮಂದಿ ಬಾಂಗ್ಲಾ ಪ್ರಜೆಗಳ ಬಳಿ ಯಾವುದೇ ಸಿಂಧುವಾದ ಪ್ರವಾಸದ ದಾಖಲೆಗಳು ಇರಲಿಲ್ಲ. ಈ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.”- ಸುಧೀರ್ ಕುಮಾರ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಕಮಿಷನರ್
ನೆಟ್‌ವರ್ಕ್ ಬೆನ್ನತ್ತಿದ ಪೊಲೀಸರು ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಅಕ್ರಮ ವಲಸಿಗರ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಬಂಧಿತ ಬಾಂಗ್ಲಾ ಪ್ರಜೆಗಳಿಗೆ ಮಂಗಳೂರಿನಲ್ಲಿ ಆಶ್ರಯ ನೀಡಿದವರು ಯಾರು? ಇವರನ್ನು ಕಟ್ಟಡದ ಕೆಲಸಕ್ಕೆ ನೇಮಿಸಿಕೊಂಡ ಗುತ್ತಿಗೆದಾರರು ಯಾರು? ಮತ್ತು ಇವರು ಭಾರತದ ಗಡಿ ದಾಟಲು ಯಾರೆಲ್ಲಾ ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ಸುರತ್ಕಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಕ್ರಮವಾಗಿ ವಿದೇಶಿ ಪ್ರಜೆಗಳಿಗೆ ಕೆಲಸ ನೀಡಿದವರ ವಿರುದ್ಧವೂ ಕಾನೂನು ಕ್ರಮ ಜರುಗಿಸುವ ಸಾಧ್ಯತೆ ಇದೆ.

