ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಜಟಾಪಟಿ ಮತ್ತು ತೀವ್ರ ಕುತೂಹಲಗಳ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಗುರುವಾರ ಬೆಳಿಗ್ಗೆ ಹೈವೋಲ್ಟೇಜ್ ‘ಬ್ರೇಕ್ಫಾಸ್ಟ್ ಮೀಟಿಂಗ್’ ಆಯೋಜನೆಗೊಂಡಿದೆ. ಈ ಸಭೆಗೆ ರಾಜ್ಯ ಸರ್ಕಾರದ ಪ್ರಮುಖ ಸಚಿವರುಗಳು ಹಾಗೂ ಕಾಂಗ್ರೆಸ್ ಮುಖಂಡರು ಲಗ್ಗೆ ಇಟ್ಟಿರುವುದು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂಬ ವದಂತಿಗಳು ದಟ್ಟವಾಗಿರುವ ಬೆನ್ನಲ್ಲೇ ನಡೆದಿರುವ ಈ ದಿಢೀರ್ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಗ್ರಾಸ ಮಾಡಿಕೊಟ್ಟಿದೆ.
‘ಕಾವೇರಿ’ಗೆ ಧಾವಿಸಿದ ಪ್ರಮುಖ ಸಚಿವರುಮುಖ್ಯಮಂತ್ರಿಗಳ ನಿವಾಸದಲ್ಲಿ ಬಿಗಿ ಭದ್ರತೆಯ ನಡುವೆ ಸಭೆ ಆರಂಭವಾಗಿದ್ದು, ಸಚಿವರಾದ ಪ್ರಿಯಾಂಕ್ ಖರ್ಗೆ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ, ಎಚ್.ಕೆ. ಪಾಟೀಲ್ ಸೇರಿದಂತೆ ಹಲವು ಹಿರಿಯ ನಾಯಕರು ಈಗಾಗಲೇ ಕಾವೇರಿ ನಿವಾಸಕ್ಕೆ ಆಗಮಿಸಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಯಕತ್ವ ಬದಲಾವಣೆ ವದಂತಿಗಳ ಹಿನ್ನೆಲೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸಿದೆ. ಎರಡೂವರೆ ವರ್ಷಗಳ ಅವಧಿ ಮುಗಿದ ದಿನದಿಂದಲೂ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಲಿದೆ ಎಂಬ ಮಾತುಗಳು ಹೈಕಮಾಂಡ್ ಮಟ್ಟದಲ್ಲಿ ಕೇಳಿಬರುತ್ತಲೇ ಇದ್ದವು. ಆದರೆ, ಪಕ್ಷದ ಉನ್ನತ ನಾಯಕತ್ವ ಇಂತಹ ವರದಿಗಳನ್ನು ಸಾರಾಸಗಟಾಗಿ ತಳ್ಳಿಹಾಕುತ್ತಾ ಬಂದಿತ್ತು.
ಆದರೆ, ಕೇವಲ ಎರಡು ದಿನಗಳ ಹಿಂದಷ್ಟೇ (ಮಂಗಳವಾರ) ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ಪ್ರಮುಖರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದರು. ಹೈಕಮಾಂಡ್ ನಾಯಕತ್ವ ಬದಲಾವಣೆಗೆ ಒಲವು ತೋರಿದ್ದು, ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ ಎನ್ನಲಾದ ಬೆನ್ನಲ್ಲೇ ಈ ಉಪಾಹಾರ ಕೂಟ ಏರ್ಪಟ್ಟಿರುವುದು ಕುತೂಹಲ ಮೂಡಿಸಿದೆ.
ಹೈಕಮಾಂಡ್ ಮತ್ತು ಸರ್ಕಾರದ ಅಧಿಕೃತ ಸ್ಪಷ್ಟನೆಮತ್ತೊಂದೆಡೆ, ಈ ಸಭೆಯನ್ನು ಕೇವಲ “ರಾಜಕೀಯ ವದಂತಿ” ಎಂದು ತಳ್ಳಿಹಾಕಿರುವ ಕಾಂಗ್ರೆಸ್ ವಲಯ, ಮುಂಬರುವ ರಾಜ್ಯಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಕಾರ್ಯತಂತ್ರದ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ ಎಂದು ಅಧಿಕೃತವಾಗಿ ತಿಳಿಸಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್, ಕರ್ನಾಟಕದ ರಾಜ್ಯಸಭಾ ಅಭ್ಯರ್ಥಿಗಳ ಪಟ್ಟಿಯನ್ನು ಇತರ ರಾಜ್ಯಗಳ ಅಭ್ಯರ್ಥಿಗಳೊಂದಿಗೆ ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದಿದ್ದಾರೆ. ಇತ್ತ ಬುಧವಾರವಷ್ಟೇ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್ ಜೊತೆಗಿನ ಮಾತುಕತೆಗಳ ಕುರಿತು ಶೀಘ್ರದಲ್ಲೇ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದರು. ತೀವ್ರ ಕುತೂಹಲ ಕೆರಳಿಸಿರುವ ಈ ಬ್ರೇಕ್ಫಾಸ್ಟ್ ಮೀಟಿಂಗ್ ಮುಕ್ತಾಯದ ನಂತರ ರಾಜ್ಯ ರಾಜಕಾರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

