ಪಾಟೀದಾರ್ ಅಬ್ಬರ, ಬೌಲರ್‌ಗಳ ಮಾರಕ ದಾಳಿ: ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್‌ಗೆ ಆರ್‌ಸಿಬಿ ಗ್ರ್ಯಾಂಡ್ ಎಂಟ್ರಿ!

ಪಾಟೀದಾರ್ ಅಬ್ಬರ, ಬೌಲರ್‌ಗಳ ಮಾರಕ ದಾಳಿ: ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್‌ಗೆ ಆರ್‌ಸಿಬಿ ಗ್ರ್ಯಾಂಡ್ ಎಂಟ್ರಿ!

​ಧರ್ಮಶಾಲಾ: ಡಿಫೆಂಡಿಂಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್‌ನ ಕ್ವಾಲಿಫೈಯರ್ 1 ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 92 ರನ್‌ಗಳ ಬೃಹತ್ ಜಯ ದಾಖಲಿಸಿದೆ. ಈ ಮೂಲಕ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿ ಬೀಗಿದೆ. ಮಂಗಳವಾರ ಇಲ್ಲಿನ ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನ ಬೆಂಗಳೂರು ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿತು.

ಪಾಟೀದಾರ್ ಸಿಡಿಲಬ್ಬರದ ಬ್ಯಾಟಿಂಗ್: ದಾಖಲೆಯ ಮೊತ್ತ​ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ಐಪಿಎಲ್ ನಾಕೌಟ್ ಇತಿಹಾಸದಲ್ಲೇ ದಾಖಲಾದ ಅತಿ ಹೆಚ್ಚಿನ ಮೊತ್ತವಾಗಿದೆ. ಆರಂಭದಲ್ಲಿ ಸಿಕ್ಕ ಎರಡು ಜೀವದಾನಗಳ ಸದುಪಯೋಗ ಪಡಿಸಿಕೊಂಡ ನಾಯಕ ರಜತ್ ಪಾಟೀದಾರ್, ಗುಜರಾತ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 33 ಎಸೆತಗಳನ್ನು ಎದುರಿಸಿದ ಅವರು 9 ಸಿಕ್ಸರ್ ಹಾಗೂ 5 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಚಚ್ಚಿದರು.

ಡೆತ್ ಓವರ್‌ಗಳಲ್ಲಿ ಆರ್‌ಸಿಬಿ ಬ್ಯಾಟರ್‌ಗಳು ಅಕ್ಷರಶಃ ಅಬ್ಬರಿಸಿದರು. ಕೊನೆಯ 5 ಓವರ್‌ಗಳಲ್ಲಿ ಬರೋಬ್ಬರಿ 86 ರನ್ ಕೊಳ್ಳೆ ಹೊಡೆದರೆ, ಕೊನೆಯ 6 ಓವರ್‌ಗಳಲ್ಲಿ 114 ರನ್ ಚಚ್ಚಿ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತಂದುಕೊಂಡರು.

​”ಔಟ್ ಆಗುವ ಭಯವಿಲ್ಲದೆ, ಬೌಲರ್‌ಗಳ ಮೇಲೆ ಒತ್ತಡ ಹೇರುವುದೇ ನನ್ನ ಯಶಸ್ಸಿನ ಮಂತ್ರ” ಎಂದು ಪಂದ್ಯದ ಬಳಿಕ ಆರ್‍ಸಿಬಿ ನಾಯಕ ರಜತ್ ಪಾಟೀದಾರ್ ತಮ್ಮ ಫಿಯರ್‌ಲೆಸ್ ಬ್ಯಾಟಿಂಗ್ ಶೈಲಿಯ ಬಗ್ಗೆ ಹೇಳಿಕೊಂಡಿದ್ದಾರೆ.

ಪೇಸರ್‌ಗಳ ವಿಕೆಟ್ ಬೇಟೆ: ಗುಜರಾತ್ ಧೂಳೀಪಟ​ಬೃಹತ್ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟನ್ಸ್ ತಂಡಕ್ಕೆ ಆರ್‌ಸಿಬಿ ವೇಗಿಗಳು ಪವರ್‌ಪ್ಲೇನಲ್ಲೇ ಆಘಾತ ನೀಡಿದರು. ಮಾರಕ ದಾಳಿ ಸಂಘಟಿಸಿದ ಬೆಂಗಳೂರು ಪೇಸರ್‌ಗಳು ಗುಜರಾತ್ ತಂಡದ ಮುಂಚೂಣಿ ವಿಕೆಟ್‌ಗಳನ್ನು ಬೇಗನೇ ಉರುಳಿಸಿದರು. ಆರ್‌ಸಿಬಿ ಬೌಲಿಂಗ್ ದಾಳಿಗೆ ತತ್ತರಿಸಿದ ಗುಜರಾತ್ ಟೈಟನ್ಸ್ 19.3 ಓವರ್‌ಗಳಲ್ಲಿ ಕೇವಲ 162 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಬೆಂಗಳೂರು 92 ರನ್‌ಗಳ ಜಯದೊಂದಿಗೆ ನೇರವಾಗಿ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿದೆ.

ಕ್ರೀಡೆ ರಾಜ್ಯ ರಾಷ್ಟ್ರೀಯ