ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026ರ ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್ಗಳ ರೋಚಕ ಜಯ ಸಾಧಿಸಿದ ಭಾರತ ತಂಡ ಫೈನಲ್ಗೆ ಲಗ್ಗೆ ಇಟ್ಟಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ (89 ರನ್, 42 ಎಸೆತ) ಹಾಗೂ ಶಿವಂ ದುಬೆ (43) ಮತ್ತು ಇಶಾನ್ ಕಿಶನ್ (39) ಅವರ ಅದ್ಭುತ ಆಟದ ನೆರವಿನಿಂದ 20 ಓವರ್ಗಳಲ್ಲಿ 253 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು.
ಇದು ಟಿ20 ವಿಶ್ವಕಪ್ ಇತಿಹಾಸದ ನಾಕೌಟ್ ಹಂತದಲ್ಲಿ ದಾಖಲಾದ ಗರಿಷ್ಠ ಮೊತ್ತವಾಗಿದೆ. 254 ರನ್ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಯುವ ಆಟಗಾರ ಜಾಕೋಬ್ ಬೆಥೆಲ್ (105 ರನ್) ಅಬ್ಬರದ ಶತಕ ಸಿಡಿಸಿ ಭಾರತೀಯ ಅಭಿಮಾನಿಗಳಲ್ಲಿ ನಡುಕ ಹುಟ್ಟಿಸಿದ್ದರು.
ಆದರೆ, ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಮಾಡಿದ ಅದ್ಭುತ ರನ್-ಔಟ್ ಪಂದ್ಯದ ಗತಿಯನ್ನೇ ಬದಲಿಸಿತು. ಅಂತಿಮವಾಗಿ ಇಂಗ್ಲೆಂಡ್ 246 ರನ್ಗಳಿಗೆ ಹೋರಾಟ ಮುಗಿಸಿತು. ಈ ಭರ್ಜರಿ ಗೆಲುವಿನೊಂದಿಗೆ ಭಾರತ ಈಗ ಅಹಮದಾಬಾದ್ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲು ಸಜ್ಜಾಗಿದೆ.

