ಕಾಳು ಮೆಣಸಿನ ದರ ದೇಶದ ಮಾರುಕಟ್ಟೆಯಲ್ಲಿ ಏರುಮುಖವಾಗಿ ಸಾಗುತ್ತಿದೆ.ಕಳೆದ ಜನವರಿ


ತಿಂಗಳಿನಲ್ಲಿ ಕಿಲೋಗೆ 500-520 ರ ಸಮೀಪ ಇದ್ದ ಕಾಳು ಮೆಣಸಿನ ದರ ಈಗ ಕೆಜಿಗೆ 700 ಕ್ಕೆ ತಲುಪಿದೆ.ಬುಧವಾರ ಸಕಲೇಶಪುರ ಹಾಗೂ ಚಿಕ್ಕಮಗಳೂರಿನ ಮಾರುಕಟ್ಟೆಗಳಲ್ಲಿ ಕಾಳು ಮೆಣಸು 700 ರೂಪಾಯಿಗಳವರೆಗೆ ಮಾರಾಟವಾಯಿತು. ಕೊಡಗಿನ ವಿವಿದ ಪಟ್ಟಣಗಳಲ್ಲಿ ಮೆಣಸಿನ ಬೆಲೆ 680- 695 ರ ವರೆಗೆ ಇತ್ತು. ಈ ಮೊದಲು 2018 ರಲ್ಲಿ ಮೆಣಸು ಸರ್ವಕಾಲಿಕ ದಾಖಲೆಯ 800 ರೂಪಾಯಿಗಳ ವರೆಗೆ ತಲುಪಿತ್ತು. ನಂತರ ವಿಯಟ್ನಾಂ ಮತ್ತು ಶ್ರೀಲಂಕಾದಿಂದ ಅಗ್ಗದ ಕಾಳು ಮೆಣಸು ಆಮದಾಗಿ ಅಂತರಾಷ್ಟ್ರೀಯಮಾರುಕಟ್ಟೆಯಲ್ಲಿ ಭಾರತದ ಕಾಳು ಮೆಣಸಿಗೆ ಬೇಡಿಕೆ ಕಡಿಮೆಯಾಗಿ ಬೆಲೆ ಕುಸಿತ ಕಂಡಿದ್ದು ಬೆಳೆಗಾರರಲ್ಲಿ ಆತಂಕವನ್ನೂಮೂಡಿಸಿತ್ತು.ಇದೀಗ ಬೆಲೆ ಮತ್ತೆ ಏರುಮುಖವಾಗುತ್ತಿರುವುದು ಬೆಳೆಗಾರರ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ.


ವಿಶ್ವದಲ್ಲಿ ವಿಯಟ್ನಾಂ ಕಾಳು ಮೆಣಸು ಬೆಳೆಯ ಅತ್ಯಂತ ದೊಡ್ಡ ಉತ್ಪಾದಕನಾಗಿದ್ದು 2019 ರಲ್ಲಿ ಸುಮಾರು ಮೂರು ಲಕ್ಷ ಟನ್ ಬೆಳೆ ಬೆಳೆದಿತ್ತು. ಆದರೆ ನಂತರದ ವರ್ಷಗಳಲ್ಲಿ ಪ್ರತಿಕೂಲ ಹವಾಮಾನ, ರೋಗ ಬಾಧೆ ಮತ್ತು ದರ ಕುಸಿತದ ಕಾರಣದಿಂದಾಗಿ ಬೆಳೆಗಾರರು ಇತರ ಬೆಳೆ ಬೆಳೆಯಲು ಮುಂದಾಗುತಿದ್ದು ಅಲ್ಲಿ ಈ ವರ್ಷದ ಉತ್ಪಾದನೆ ಸುಮಾರು ಎರಡು ಲಕ್ಷ ಟನ್ ಗಿಂತ ಸ್ವಲ್ಪ ಹೆಚ್ಚಾಗಿದೆ. ಇಂಡೋನೇಷ್ಯಾ ಎರಡನೇ ಸ್ಥಾನದಲ್ಲಿದ್ದು ಇಲ್ಲಿ ವಾರ್ಷಿಕ 85 ಸಾವಿರ ಟನ್ ಬೆಳೆ ಬೆಳೆಯಲಾಗುತ್ತಿದೆ. ಭಾರತದಲ್ಲಿ ವರ್ಷಕ್ಕೆ 70 ಸಾವಿರ ಟನ್ ಕಾಳುಮೆಣಸಿನ ಬೆಳೆಯುತ್ತಿದ್ದು, ರಾಜ್ಯದಲ್ಲಿ 36 ಸಾವಿರ ಟನ್ ಉತ್ಪಾದನೆ ಆಗುತಿದ್ದು ಕೇರಳದಲ್ಲಿ ಸುಮಾರು 25 ಸಾವಿರ ಟನ್ ಉತ್ಪಾದನೆ ಆಗುತ್ತಿದೆ. ಆದರೆ ಕಳೆದ ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಕೇರಳದಲ್ಲಿ ಮೆಣಸು ಉತ್ಪಾದನೆ ಶೇಕಡಾ 20 ರಿಂದ 25 ರಷ್ಟು ನಾಶವಾಗಿದೆ ಎಂದು ಹೇಳಲಾಗಿದೆ. ಶೀತ ವಾತಾವರಣವು ದೇಶೀಯ ಕಾಳುಮೆಣಸು ಬಳಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಇದರಿಂದಾಗಿ ಉತ್ತಮ ಗುಣಮಟ್ಟದ ಮೆಣಸು ರೂ. ಪ್ರತಿ ಕಿಲೋಗಾಂಗೆ. 690-700 ರೂಪಾಯಿವರೆಗೆ ಏರಿಕೆಯಾಗಿದೆ.

