
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಲನಚಿತ್ರ ರಕ್ತಚಂದನ ಮಾಫಿಯಾವನ್ನೇ ಕೇಂದ್ರವನ್ನಾಗಿ ಆಂಧ್ರದ ದಟ್ಟಾರಣ್ಯದಲ್ಲಿ ನಡೆಯುವ ಈ ಕರಾಳ ದಂಧೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸುವಂತೆ ಮಾಡಿತ್ತು. ‘ಪುಷ್ಪ’ ಚಲನಚಿತ್ರದ ಮಾದರಿಯಲ್ಲೇ ನಮ್ಮ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ದಂಧೆ ಕಾರ್ಯನಿರ್ವಹಿಸುತ್ತಿದೆ.


ಪ್ರತಿವರ್ಷ ಮಳೆ ಹಿಡಿಯುತ್ತಿದ್ದಂತೆ ಅಕ್ರಮ ಹರಳು ಗಣಿಗಾರಿಕೆ, ಪಶ್ಚಿಮಘಟ್ಟ ಪ್ರದೇಶವಾದ ಪುಷ್ಪಗಿರಿ ಹಾಗೂ ಸಂಪಾಜೆ ಸಮೀಪದ ನಿಶಾನಿ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ರವಿ ಕುಶಾಲಪ್ಪನವರು ಅಕ್ರಮ ಹರಳು ಕಲ್ಲು ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಖುದ್ದಾಗಿ ಭೇಟಿ ನೀಡಿ, ಬೆಟ್ಟಗಳಲ್ಲಿ ಆಗಿದಿರುವ ಗುಂಡಿಗಳನ್ನು ವೀಕ್ಷಿಸಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮುತುವರ್ಜಿ ವಹಿಸುವಂತೆ ಹೇಳಿದ್ದರು. ಆದರೆ ಇದೀಗ ಎಂದಿನಂತೆ ಅಕ್ರಮ ಕೆಂಪು ಹರಳು ಕಲ್ಲುಗಳ ದಂದೆ ವ್ಯಾಪಕವಾಗಿ ನಡೆಯುತ್ತಿದೆ. ನಿನ್ನೆ
ಕುಶಾಲನಗರ ಕಡೆಯಿಂದ ಹುಣಸೂರು ಕಡೆಗೆ ಪಿಕ್ ಆಪ್ ವಾಹನದಲ್ಲಿ ಅಕ್ರಮವಾಗಿ ಹರಳು ಕಲ್ಲು ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯವರು ಸಿನೀಮಿಯ ರೀತಿಯಲ್ಲಿ ಬೆನ್ನುಹತ್ತಿ ಮಾಲು ಸಮೇತ ವಾಹನ ವಶ ಪಡಿಸಿಕೊಂಡು ಮೂವರನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದೆ.
ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳ ತಂಡ 2495 ಕೆ.ಜಿ. ಹರಳು ಕಲ್ಲು ವಶ ಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಹರಳು ಕಲ್ಲು ಸಾಗಿಸುತ್ತಿದ್ದ ವಾಹನದ ಚಾಲಕ ಅರಣ್ಯ ತಪಾಸಣಾ ಕೇಂದ್ರದ ಸಿಬ್ಬಂದಿಗಳು ನಿಲ್ಲಿಸುವಂತೆ ಸೂಚನೆ ನೀಡಿದರೂ ವೇಗವಾಗಿ ಚಾಲನೆ ಮಾಡಿಕೊಂಡ ಹೋದಾಗ ಆರ್.ಎಫ್.ಒ. ರತನ್ ಕುಮಾರ್ ಅವರು ಹಿಂಬಾಲಿಸಿ ವಾಹನವನ್ನು ತಡೆದು ಮಾಲು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಬೆಂಗಾವಲಾಗಿ ತೆರಳುತ್ತಿದ್ದ ವಾಹನವನ್ನು ವಶ ಪಡಿಸಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂದಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿದರೆ ಈ ಜಾಲದಲ್ಲಿ ಭಾಗಿಯಾಗಳಾಗಿರುವ ಪ್ರಮುಖ ವ್ಯಕ್ತಿಗಳ ಬಂಧನ ಮಾಡುವ ಮೂಲಕ ಈ ಅಕ್ರಮ ಚಟುವಟಿಕೆಯನ್ನು ತಡೆಯಬಹುದಾಗಿದೆ. ನಿಶಾನಿ ಬೆಟ್ಟದಲ್ಲಿ ಇದೇ ರೀತಿ ಹರಳು ಕಲ್ಲುಗಳ ಗಣಿಗಾರಿಕೆ ನಡೆದರೆ ಮತ್ತೊಮ್ಮೆ ಭೂಕುಸಿತಕ್ಕೆ ಈ ಭಾಗದಲ್ಲಿ ಎಡೆ ಮಾಡಿ ಕೊಟ್ಟಂತಾಗುತ್ತದೆ.
