ಧಾರವಾಡ/ನೇಪಾಳ : ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತದಲ್ಲಿ ಕರ್ನಾಟಕ ಮೂಲದ 45 ವರ್ಷದ ಸಾಫ್ಟ್‌ವೇರ್ ಎಂಜಿನಿಯರೊಬ್ಬರು ನಾಪತ್ತೆಯಾಗಿದ್ದಾರೆ. ಧಾರವಾಡ ಮೂಲದವರಾದ ರಾಕೇಶ್ ನಾಯಕ್ ನಾಪತ್ತೆಯಾಗಿರುವ ಕನ್ನಡಿಗ ಎಂದು ಗುರುತಿಸಲಾಗಿದ್ದು, ಅವರ ಕುಟುಂಬಸ್ಥರು ತೀವ್ರ ಆತಂಕದಲ್ಲಿದ್ದಾರೆ.

ಕಳೆದ 10 ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದ ರಾಕೇಶ್ ನಾಯಕ್ ಅವರು, ಇತ್ತೀಚೆಗೆ ‘ಈಶಾ ಫೌಂಡೇಶನ್’ ಆಯೋಜಿಸಿದ್ದ ಮಾನಸಸರೋವರ ಪ್ರವಾಸದ ಪ್ಯಾಕೇಜ್‌ನಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು. ಮಾನಸಸರೋವರ ಯಾತ್ರೆಯ ಮುಕ್ತಾಯದ ಹಂತದಲ್ಲಿ ನೇಪಾಳ ಮಾರ್ಗವಾಗಿ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ರಾಕೇಶ್ ನಾಯಕ್ ಅವರ ಸಂಪರ್ಕ ಸಿಗದ ಕಾರಣ ಧಾರವಾಡದಲ್ಲಿರುವ ಅವರ ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ರಾಕೇಶ್ ಅವರ ಪತ್ತೆಗಾಗಿ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತವಾಗಬೇಕೆಂದು ಕುಟುಂಬ ಮನವಿ ಮಾಡಿದೆ.
13 ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲಿ ಬ್ಲಾಕ್: ಈ ಘಟನೆ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿ, ನೇಪಾಳ ಮತ್ತು ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಪ್ರಸ್ತುತ ಕರ್ನಾಟಕದ 13 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದೆ. ಈ ಪೈಕಿ 11 ಜನರು ಬೆಂಗಳೂರು ನಗರ ಜಿಲ್ಲೆಗೆ ಸೇರಿದವರಾಗಿದ್ದಾರೆ.
ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ರಾಜ್ಯ ಸರ್ಕಾರವು ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ.

