ಉಡುಪಿ: ಶೈಕ್ಷಣಿಕ ನಗರಿ ಮಣಿಪಾಲದಾದ್ಯಂತ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಬಾರ್ ಮತ್ತು ಪಬ್ಗಳ ಮೇಲೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಲಾಗಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕ-ಯುವತಿಯರಿಗೆ ಮದ್ಯ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಈ ದಾಳಿ ನಡೆದಿದ್ದು, ಒಟ್ಟು 87 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ.

6 ಪಬ್ಗಳ ವಿರುದ್ಧ ಪ್ರಕರಣ ದಾಖಲುಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬಾರ್ ಮತ್ತು ಪಬ್ಗಳಲ್ಲಿ ಅಕ್ರಮ ಚಟುವಟಿಕೆಗಳು ಹಾಗೂ ನಿಯಮ ಬಾಹಿರ ಮದ್ಯ ಪೂರೈಕೆ ತಡೆಯಲು ವಿಶೇಷ ತಂಡಗಳನ್ನು ರಚಿಸಿ ಈ ಪರಿಶೀಲನೆ ನಡೆಸಲಾಯಿತು. ದಾಳಿಯ ಸಂದರ್ಭದಲ್ಲಿ 21 ವರ್ಷದೊಳಗಿನ ವಿದ್ಯಾರ್ಥಿಗಳು ಹಾಗೂ ಯುವಜನರು ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ. ನಿಯಮ ಉಲ್ಲಂಘಿಸಿದ 6 ಪಬ್ ಹಾಗೂ ಬಾರ್ ಮಾಲೀಕರ ವಿರುದ್ಧ ಅಬಕಾರಿ ಕಾಯ್ದೆಯಡಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ದಾಳಿ ನಡೆಸಿದ ಪೊಲೀಸರು ಸ್ಥಳದಲ್ಲಿದ್ದ ಯುವಕ-ಯುವತಿಯರ ಮಾಹಿತಿ ಪಡೆದು, ಅವರ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ನಿಯಮ ಮೀರಿ ಮದ್ಯ ಹಾಗೂ ಹುಕ್ಕಾ ಸರಬರಾಜು ಮಾಡುತ್ತಿದ್ದ ಪಬ್ಗಳ ಲೈಸನ್ಸ್ ರದ್ದುಗೊಳಿಸುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶಿಫಾರಸು ಮಾಡಲು ಪೊಲೀಸರು ಮುಂದಾಗಿದ್ದಾರೆ. ಶೈಕ್ಷಣಿಕ ವಾತಾವರಣದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಆಸ್ಪದ ನೀಡುವುದಿಲ್ಲ ಹಾಗೂ ಮುಂದಿನ ದಿನಗಳಲ್ಲೂ ಇಂತಹ ದಾಳಿಗಳು ಮುಂದುವರಿಯಲಿವೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.

