
ಉಪ್ಪಿನಂಗಡಿ: ನದಿಯಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದ ಬಾಲಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಳಿಯೂರಿನಲ್ಲಿ ಸಂಭವಿಸಿದೆ.
ಮೂಲತಃ ಬಂಟ್ವಾಳ ತಾಲೂಕಿನ ಮಾಣಿ ನಿವಾಸಿ ದಿ.ಮಹಮ್ಮದ್ ತಾಹೀರ್ ಅವರ ಮಗ ಮಾಣಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದ ಮಹಮ್ಮದ್ ಸಲ್ಮಾನ್ ಮೃತ ಬಾಲಕ.
ಈತ ತನ್ನ ಸೋದರ ಸಂಬಂಧಿ ಬಾಲಕ ಮಹಮ್ಮದ್ ಇರ್ಫಾರ್ ಜತೆಗೂಡಿ ಪೆರ್ನೆಯಲ್ಲಿನ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ನದಿಯಲ್ಲಿ ಸ್ನಾನ ಮಾಡುವ ಬಯಕೆಯಿಂದ ಬಿಳಿಯೂರಿನ ಅಣೆಕಟ್ಟಿನ ಬಳಿ ನದಿಗಿಳಿದಾತ ಕಾಲು ಜಾರಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಈತನ ಜತೆಗಿದ್ದ ಮಹಮ್ಮದ್ ಇರ್ಫಾರ್ ರಕ್ಷಿಸಲ್ಪಟ್ಟಿದ್ದಾನೆ.
ಮೃತ ಮಹಮ್ಮದ್ ಸಲ್ಮಾನ್‌ನದ್ದು ಬಡಕುಟುಂಬವಾಗಿದ್ದು, ಆತನ ತಂದೆ ವರ್ಷದ ಹಿಂದೆ ಸಾವನ್ನಪ್ಪಿದ್ದರು. ತಾಯಿ ಅನಾರೋಗ್ಯಪೀಡಿತರಾಗಿದ್ದು, ತನ್ನ ಕಿರಿಯ ಸಹೋದರನೊಂದಿಗೆ ಬಂಧುಗಳ ಸಹಕಾರದೊಂದಿಗೆ ಜೀವನ ನಡೆಸುತ್ತಿದ್ದಾರೆ. ಪ್ರಸಕ್ತ ಮಾಣಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಓದುತ್ತಿದ್ದ ಈತ ಮುಂಬರುವ ಪಬ್ಲಿಕ್ ಪರೀಕ್ಷೆಗೆ ಸಿದ್ಧತೆಯನ್ನು ಮಾಡಿಕೊಂಡಿದ್ದ.

