ಬೆಂಗಳೂರು: ಅಪರಾಧ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ಶಂಕಿತ ಬ್ಯಾಂಕ್ ಖಾತೆಗಳನ್ನು ತಕ್ಷಣವೇ ‘ಡೆಬಿಟ್ ಫ್ರೀಜ್’ (Debit-Freeze) ಮಾಡಲು ಪೊಲೀಸರಿಗೆ ಇರುವ ಅಧಿಕಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS), 2023ರ ಸೆಕ್ಷನ್ 106ರ ಅಡಿಯಲ್ಲಿ ಕಾರ್ಯನಿರ್ವಹಿಸುವಾಗ ನ್ಯಾಯಾಲಯದಿಂದ ಮುಂಚಿತವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಈ ಮಹತ್ವದ ತೀರ್ಪನ್ನು ನೀಡಿದ್ದು, ಸೈಬರ್ ಅಪರಾಧ ಮತ್ತು ಡಿಜಿಟಲ್ ಹಣಕಾಸು ವಂಚನೆಗಳ ತನಿಖೆಗೆ ಇದು ಅತ್ಯಂತ ಪ್ರಮುಖ ನಿರ್ಧಾರವಾಗಿದೆ ಎಂದು ಕರ್ನಾಟಕ ರಾಜ್ಯ ಸೈಬರ್ ಕಮಾಂಡ್ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಬೆಂಗಳೂರಿನ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ‘M/s JAR Gold Retail Pvt Ltd’ ಸಂಸ್ಥೆಯ ವಿರುದ್ಧದ ಜಂಟಿ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (BUDS Act, 2019) ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ಹೊರಬಿದ್ದಿದೆ.
ಈ ಹಿಂದೆ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸಷನ್ಸ್ ನ್ಯಾಯಾಲಯವು ಜಪ್ತಿ ಮಾಡಲಾಗಿದ್ದ ಚಿನ್ನ, ಬೆಳ್ಳಿ ಹಾಗೂ ಫ್ರೀಜ್ ಮಾಡಲಾಗಿದ್ದ ಬ್ಯಾಂಕ್ ಖಾತೆಗಳನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಹೈಕೋರ್ಟ್ ಈ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಪೊಲೀಸರ ತನಿಖಾ ಅಧಿಕಾರವನ್ನು ಎತ್ತಿಹಿಡಿದಿದೆ.
ಸೈಬರ್ ಕಮಾಂಡ್ ಸ್ವಾಗತ:ಕರ್ನಾಟಕ ರಾಜ್ಯ ಸೈಬರ್ ಕಮಾಂಡ್ ಈ ತೀರ್ಪನ್ನು ಸ್ವಾಗತಿಸಿದ್ದು, ಡಿಜಿಟಲ್ ಫೈನಾನ್ಶಿಯಲ್ ಫ್ರಾಡ್ ಹಾಗೂ ಸೈಬರ್ ಅಪರಾಧಗಳಲ್ಲಿ ಅಪರಾಧಿಗಳು ತಕ್ಷಣವೇ ಹಣವನ್ನು ಖಾಲಿ ಮಾಡುವುದನ್ನು ತಡೆಯಲು ಈ ತೀರ್ಪು ಪೊಲೀಸರಿಗೆ ಹೆಚ್ಚಿನ ಶಕ್ತಿ ನೀಡಲಿದೆ ಎಂದು ಹೇಳಿದೆ.

