ಇಂದಿರಾ ಕ್ಯಾಂಟೀನ್, ಕ್ವಿಕ್ ಕಾಮರ್ಸ್ ಗೋದಾಮಿಗೆ ಬೀಗ; ಅಶುಚಿತ್ವ ವಾತಾವರಣದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಭೇಟಿ!

ಇಂದಿರಾ ಕ್ಯಾಂಟೀನ್, ಕ್ವಿಕ್ ಕಾಮರ್ಸ್ ಗೋದಾಮಿಗೆ ಬೀಗ; ಅಶುಚಿತ್ವ ವಾತಾವರಣದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಭೇಟಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಶುಚಿತ್ವ ಮತ್ತು ಕಳಪೆ ಆಹಾರ ನಿರ್ವಹಣೆ ವಿರುದ್ಧ ಆಹಾರ ಸುರಕ್ಷತಾ ಇಲಾಖೆ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಮಂಗಳವಾರ ನಗರಾದ್ಯಂತ ನಡೆದ ಪರಿಶೀಲನಾ ಕಾರ್ಯಾಚರಣೆಯ ವೇಳೆ, ಗೊಟ್ಟಿಗೆರೆಯ ‘ಇಂದಿರಾ ಕ್ಯಾಂಟೀನ್’ ಮತ್ತು ಹೊಸಕೋಟೆಯಲ್ಲಿರುವ ಪ್ರಮುಖ ‘ಕ್ವಿಕ್ ಕಮರ್ಸ್’ ಸಂಸ್ಥೆಯ ಗೋದಾಮಿನಲ್ಲಿ ಅತ್ಯಂತ ಅಶುಚಿ ವಾತಾವರಣ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಎರಡೂ ಸ್ಥಳಗಳನ್ನು ಸೀಲ್‌ಡೌನ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ನಗರದ ಹೆಸರಾಂತ ಸ್ಟಾರ್ ಹೋಟೆಲ್‌ಗಳು ಹಾಗೂ ಹೈ-ಎಂಡ್ ರೆಸ್ಟೋರೆಂಟ್‌ಗಳ ಮೇಲೆ ಸರಣಿ ದಾಳಿ ನಡೆಸಿ ಎಚ್ಚರಿಕೆ ನೀಡಿದ್ದ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆ (FSSAI), ಇದೀಗ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಲಭ್ಯವಾಗುವ ಇಂದಿರಾ ಕ್ಯಾಂಟೀನ್‌ಗಳ ಮೇಲೆಯೂ ಕಣ್ಣಿಟ್ಟಿದೆ.

ಬೆಳಗ್ಗಿನಿಂದಲೇ ಕಾರ್ಯಾಚರಣೆಗಿಳಿದ ಇಲಾಖೆಯ ವಿಶೇಷ ತಂಡಗಳು, ಬಡವರಿಗೆ ಅತ್ಯಂತ ರಿಯಾಯಿತಿ ದರದಲ್ಲಿ ಟಿಫಿನ್ ಹಾಗೂ ಊಟ ಪೂರೈಸುವ ಒಟ್ಟು ಮೂರು ಇಂದಿರಾ ಕ್ಯಾಂಟೀನ್ ಅಡುಗೆ ಮನೆಗಳನ್ನು ಪರಿಶೀಲಿಸಿದವು. ಈ ವೇಳೆ ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್ ಅಡುಗೆ ಮನೆಯಲ್ಲಿ ಆಹಾರ ತಯಾರಿ ಹಾಗೂ ಸಂಗ್ರಹಣೆಯಲ್ಲಿ ಕನಿಷ್ಠ ನೈರ್ಮಲ್ಯವನ್ನೂ ಕಾಯ್ದುಕೊಳ್ಳದಿರುವುದು ಬೆಳಕಿಗೆ ಬಂದಿದೆ.

ಅದೇ ರೀತಿ, ನಿಮಿಷಗಳಲ್ಲಿ ದಿನಸಿ ಹಾಗೂ ಆಹಾರ ಪದಾರ್ಥಗಳನ್ನು ಪೂರೈಸುವ ಪ್ರಸಿದ್ಧ ‘ಯೂನಿಕಾರ್ನ್’ ಕ್ವಿಕ್ ಕಮರ್ಸ್ (Quick-Commerce) ಕಂಪನಿಯ ಹೊಸಕೋಟೆ ಗೋದಾಮಿನಲ್ಲೂ ಸಹ ನೈರ್ಮಲ್ಯದ ಕೊರತೆ ಕಂಡುಬಂದಿದೆ. ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟಿದ್ದಕ್ಕಾಗಿ ಇಲಾಖೆಯು ತಕ್ಷಣವೇ ಗೋದಾಮಿಗೆ ಬೀಗ ಜಡಿದು, ನೋಟಿಸ್ ನೀಡಿದೆ.

​ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವ ಯಾವುದೇ ಹೋಟೆಲ್, ಕ್ಯಾಂಟೀನ್ ಅಥವಾ ಆನ್‌ಲೈನ್ ಡೆಲಿವರಿ ಗೋದಾಮುಗಳನ್ನಾಗಲಿ ಮುಲಾಜಿಲ್ಲದೆ ಸೀಲ್ ಮಾಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆರೋಗ್ಯ ಮತ್ತು ಸೌಂದರ್ಯ ರಾಜ್ಯ