ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ 3-ಸ್ಟಾರ್ ಹಾಗೂ 5-ಸ್ಟಾರ್ ಹೋಟೆಲ್‌ಗಳ ಅಡುಗೆ ಮನೆಗಳಲ್ಲಿ ಗ್ರಾಹಕರ ಆರೋಗ್ಯದ ಜೊತೆ ತೀವ್ರ ಆಟವಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ (Food Safety and Drug Administration Department) ಆಹಾರ ಸುರಕ್ಷತಾ ವಿಭಾಗವು ನಡೆಸಿದ ಬೃಹತ್ ಕಾರ್ಯಚರಣೆಯಲ್ಲಿ ಕಾಲಾವಧಿ ಮುಗಿದ (Expired) ಆಹಾರ ಪದಾರ್ಥಗಳು ಹಾಗೂ ಫಂಗಸ್ ಹಿಡಿದ ತರಕಾರಿಗಳು ಪತ್ತೆಯಾಗಿವೆ.

ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕರಿಂದ ಸಾಲು ಸಾಲು ದೂರುಗಳು ಬಂದ ಹಿನ್ನೆಲೆಯಲ್ಲಿ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈ ದಿಢೀರ್ ದಾಳಿಗೆ ಆದೇಶಿಸಿತ್ತು.
30 ತಂಡಗಳಿಂದ 26 ಹೋಟೆಲ್‌ಗಳ ಮೇಲೆ ಸರ್ಪ್ರೈಸ್ ರೈಡ್ಆರೋಗ್ಯ ಇಲಾಖೆಯು ರಚಿಸಿದ್ದ 30 ವಿಶೇಷ ಅಧಿಕಾರಿಗಳ ತಂಡವು ಬೆಂಗಳೂರಿನ ವಿವಿಧೆಡೆ ಇರುವ 26 ಪ್ರಮುಖ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿದೆ. ಈ ಪರಿಶೀಲನೆ ವೇಳೆ ಒಟ್ಟು 35 ಆಹಾರ ಮಾದರಿಗಳನ್ನು ವಶಕ್ಕೆ ಪಡೆದು ಲ್ಯಾಬೊರೇಟರಿ ಪರೀಕ್ಷೆಗೆ ರವಾನಿಸಲಾಗಿದೆ.

ವಶಪಡಿಸಿಕೊಂಡ ಮಾದರಿಗಳಲ್ಲಿ ಚಹಾ ಪುಡಿ, ಚಿಕನ್, ಮಟನ್, ಮೀನು, ಅಡುಗೆ ಎಣ್ಣೆ, ಖಾರದ ಪುಡಿ, ಅರಿಶಿನ, ಟೊಮೆಟೊ ಸಾಸ್, ಲಿಂಬೆ ರಸ, ಚೀಸ್, ಹಾಲಿನ ಉತ್ಪನ್ನಗಳು, ಗೇರುಬೀಜ ಹಾಗೂ ಇತರೆ ಮಸಾಲೆ ಪದಾರ್ಥಗಳು ಸೇರಿವೆ.
ಹೋಟೆಲ್‌ಗಳಿಗೆ ನೋಟಿಸ್ ಜಾರಿ: ಕಾನೂನು ಕ್ರಮಕ್ಕೆ ಸಿದ್ಧತೆಈ ಗಂಭೀರ ಲೋಪಗಳು ಕಂಡುಬಂದ ಹೋಟೆಲ್‌ಗಳ ಮಾಲೀಕರಿಗೆ ಆಹಾರ ಸುರಕ್ಷತಾ ಇಲಾಖೆಯು ತಕ್ಷಣವೇ ನೋಟಿಸ್ ನೀಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 (Food Safety and Standards Act, 2006) ರ ಅಡಿಯಲ್ಲಿ ನ್ಯಾಯ ನಿರ್ಣಾಯಕ ಅಧಿಕಾರಿಗಳ ಸಮ್ಮುಖದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಗ್ರಾಹಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳನ್ನು ಬಿಡುವುದಿಲ್ಲ ಮತ್ತು ಮುಂದಿನ ದಿನಗಳಲ್ಲೂ ಇಂತಹ ಕಠಿಣ ಕ್ರಮಗಳು ಮುಂದುವರಿಯಲಿವೆ ಎಂದು ಇಲಾಖೆ ಎಚ್ಚರಿಸಿದೆ.

