ರಾಷ್ಟ್ರೀಯ ಕೈಮಗ್ಗ ದಿನ: ‘GRWM’ ಟ್ರೆಂಡ್ ಫಾಲೋ ಮಾಡಿ ಭಾರತದ ಕೈಮಗ್ಗ ವೈವಿಧ್ಯ ಪ್ರಚುರಪಡಿಸಿ; ಪ್ರಧಾನಿ ಮೋದಿ ಕರೆ

ರಾಷ್ಟ್ರೀಯ ಕೈಮಗ್ಗ ದಿನ: ‘GRWM’ ಟ್ರೆಂಡ್ ಫಾಲೋ ಮಾಡಿ ಭಾರತದ ಕೈಮಗ್ಗ ವೈವಿಧ್ಯ ಪ್ರಚುರಪಡಿಸಿ; ಪ್ರಧಾನಿ ಮೋದಿ ಕರೆ

ನವದೆಹಲಿ: ರಾಷ್ಟ್ರೀಯ ಕೈಮಗ್ಗ ದಿನದ ಸಂದರ್ಭದಲ್ಲಿ ದೇಶದ ಸಾಂಪ್ರದಾಯಿಕ ಕೈಮಗ್ಗ ನೇಕಾರಿಕೆ ಹಾಗೂ ವಿಶಿಷ್ಟ ವಸ್ತ್ರ ವೈವಿಧ್ಯತೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ವಿಶೇಷ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ‘GRWM’ (Get Ready With Me – ಗೆಟ್ ರೆಡಿ ವಿತ್ ಮಿ) ಟ್ರೆಂಡ್ ಅನುಸರಿಸಿ ವೀಡಿಯೊಗಳನ್ನು ಹಂಚಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಪ್ರಧಾನಿ ಮೋದಿ ಅವರು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಆಗಸ್ಟ್ 7 ರಾಷ್ಟ್ರೀಯ ಕೈಮಗ್ಗ ದಿನವಾಗಿದೆ. ಬನ್ನಿ, ಭಾರತದ ಕೈಮಗ್ಗ ರಂಗದ ವೈವಿಧ್ಯತೆಯನ್ನು ಹೆಚ್ಚು ಜನಪ್ರಿಯಗೊಳಿಸೋಣ. ನಿಮ್ಮ ನೆಚ್ಚಿನ ಕೈಮಗ್ಗ ಉಡುಪುಗಳು ಮತ್ತು ಉತ್ಪನ್ನಗಳೊಂದಿಗೆ ‘GRWM’ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ. ವೀಡಿಯೊ ಜೊತೆಗೆ #NationalHandloomDay ಹ್ಯಾಶ್‌ಟ್ಯಾಗ್ ಬಳಸುವುದನ್ನು ಮರೆಯಬೇಡಿ” ಎಂದು ಕೋರಿದ್ದಾರೆ.

ಡಿಜಿಟಲ್ ವೇದಿಕೆಗಳ ಮೂಲಕ ಪ್ರಚಾರ: ​ಇಂದಿನ ಯುವಪೀಳಿಗೆಯಲ್ಲಿ ರೀಲ್ಸ್ ಹಾಗೂ ಕಿರು ವೀಡಿಯೊಗಳ ಭರಾಟೆ ಹೆಚ್ಚಾಗಿರುವುದರಿಂದ, ಕೈಮಗ್ಗ ಉಡುಪುಗಳನ್ನು ತೊಟ್ಟು ಸಿದ್ಧವಾಗುವ ‘Get Ready With Me’ (GRWM) ವೀಡಿಯೊಗಳ ಮೂಲಕ ಸ್ಥಳೀಯ ನೇಯ್ಗೆ ಸಂಸ್ಕೃತಿಗೆ ಉತ್ತೇಜನ ನೀಡಬಹುದು ಎಂಬುದು ಪ್ರಧಾನಿಯವರ ಕಲ್ಪನೆಯಾಗಿದೆ. ಈ ಮೂಲಕ ಭಾರತೀಯ ಕೈಮಗ್ಗ ಉದ್ಯಮ ಮತ್ತು ದೇಶೀಯ ವಸ್ತ್ರ ವಿನ್ಯಾಸಗಳಿಗೆ ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಿನ ಪ್ರಚಾರ ದೊರೆಯಲಿದೆ.

ರಾಷ್ಟ್ರೀಯ ಕೈಮಗ್ಗ ದಿನದ ಹಿನ್ನೆಲೆ:​ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಘಟ್ಟವಾಗಿದ್ದ 1905ರ ಸ್ವದೇಶಿ ಚಳವಳಿ ಆಗಸ್ಟ್ 7ರಂದು ಪ್ರಾರಂಭವಾಗಿತ್ತು. ದೇಶೀಯ ಉದ್ಯಮಗಳಿಗೆ ಮತ್ತು ವಿಶೇಷವಾಗಿ ಕೈಮಗ್ಗ ವಲಯಕ್ಕೆ ಮರುಜೀವ ನೀಡಿದ ಈ ದಿನದ ಸವಿನೆನಪಿಗಾಗಿ ಪ್ರತಿವರ್ಷ ಆಗಸ್ಟ್ 7 ಅನ್ನು ‘ರಾಷ್ಟ್ರೀಯ ಕೈಮಗ್ಗ ದಿನ’ವಾಗಿ ಆಚರಿಸಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ಚೆನ್ನೈನಲ್ಲಿ ಮೊದಲ ರಾಷ್ಟ್ರೀಯ ಕೈಮಗ್ಗ ದಿನಾಚರಣೆಗೆ ಚಾಲನೆ ನೀಡಿದ್ದರು. ಪ್ರಸ್ತುತ ಭಾರತದಲ್ಲಿ 35 ಲಕ್ಷಕ್ಕೂ ಹೆಚ್ಚು ಜನರು ಕೈಮಗ್ಗ ವಲಯವನ್ನು ನೆಚ್ಚಿಕೊಂಡಿದ್ದು, ಅದರಲ್ಲಿ ಶೇಕಡಾ 70 ಕ್ಕೂ ಹೆಚ್ಚು ಮಹಿಳೆಯರೇ ಇರುವುದು ಈ ರಂಗದ ಹೆಮ್ಮೆಯಾಗಿದೆ.

ರಾಜಕೀಯ ರಾಷ್ಟ್ರೀಯ