ಎಂ. ಕೃಷ್ಣಪ್ಪ ನಿವಾಸದಲ್ಲಿ ಹೈಕಮಾಂಡ್ ಮಟ್ಟದ ಮಾತುಕತೆ: ‘ಕುಟುಂಬ ಅಂದಮೇಲೆ ಅಸಮಾಧಾನ ಸಹಜ’ ಎಂದ ಸುರ್ಜೇವಾಲಾ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆ ಹಂಚಿಕೆ ಬಳಿಕ ಉಂಟಾಗಿರುವ ಅಸಮಾಧಾನವನ್ನು ಶಮನಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯ ನಾಯಕತ್ವ ಸಕ್ರಿಯವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ರಾತ್ರಿ ವಿಜಯನಗರದ ಹಿರಿಯ ಕಾಂಗ್ರೆಸ್ ಶಾಸಕ ಎಂ. ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಾ ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದರು.
ಸಂಪುಟ ವಿಸ್ತರಣೆಯಲ್ಲಿ ಸಚಿವಾಕಾಂಕ್ಷಿಯಾಗಿದ್ದ ಎಂ. ಕೃಷ್ಣಪ್ಪ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಸುರ್ಜೇವಾಲಾ ಹಾಗೂ ಸಿಎಂ ಅವರೇ ಶಾಸಕರ ಮನೆಗೆ ತೆರಳಿ ಸಮಾಧಾನಪಡಿಸುವ ಯತ್ನ ನಡೆಸಿದ್ದಾರೆ.
’ಪಕ್ಷ ಅಂದಮೇಲೆ ಭಿನ್ನಾಭಿಪ್ರಾಯ ಸಹಜ’: ಸುರ್ಜೇವಾಲಾಭೇಟಿಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲಾ, “ಕೃಷ್ಣಪ್ಪ ಜಿ ಹಾಗೂ ನಮ್ಮ ಯುವ ಮಿತ್ರ ಪ್ರಿಯಾ ಕೃಷ್ಣ ಎಲ್ಲರೂ ಒಂದೇ ಕುಟುಂಬದ ಭಾಗ. ಒಂದು ಕುಟುಂಬ ಎಂದಮೇಲೆ ಅಲ್ಲಿ ಕೆಲವೊಂದು ನ್ಯಾಯಯುತ ಕಾಳಜಿಗಳು, ದೂರುಗಳು ಹಾಗೂ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಕುಟುಂಬದ ಸದಸ್ಯರೊಂದಿಗೆ ಕುಳಿತು ಮಾತನಾಡುವುದು ನಮ್ಮ ಕರ್ತವ್ಯ. ಎಂ. ಕೃಷ್ಣಪ್ಪ ಅವರು ಕಾಂಗ್ರೆಸ್ ಪಕ್ಷದ ಅತ್ಯಂತ ಅನುಭವಿ ಮತ್ತು ಹಿರಿಯ ನಾಯಕರಲ್ಲೊಬ್ಬರು” ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಅವರು, “ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ಸಾಧ್ಯವಾಗಲಿಲ್ಲ ಎಂಬುದು ನಿಜ. ಆದರೆ ಕುಟುಂಬದ ಹಿರಿಯ ಸದಸ್ಯರ ಬಳಿ ಬಂದು ಮಾತನಾಡುವುದು ನಮ್ಮ ಹಕ್ಕು. ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮನಸ್ಸಿನಲ್ಲಿದ್ದ ಭಾವನೆಗಳು, ಕುಂದುಕೊರತೆಗಳು ಹಾಗೂ ಕಾಳಜಿಗಳನ್ನು ನಾವು ಆಲಿಸಿದ್ದೇವೆ” ಎಂದು ಸ್ಪಷ್ಟಪಡಿಸಿದರು.

