ಯಾದಗಿರಿ: ಜಿಲ್ಲೆಯ ಕಡೆಚೂರು-ಬಡಿಯಾಳ ಕೈಗಾರಿಕಾ ಪ್ರದೇಶದ ಪ್ರಮುಖ ಕಾರ್ಖಾನೆಯೊಂದರಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದ ಅನಿಲ ಸೋರಿಕೆಯಿಂದಾಗಿ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿರುವ ದೂಃಖದ ಘಟನೆ ವರದಿಯಾಗಿದೆ.

ಮೃತಪಟ್ಟವರನ್ನು ತೆಲಂಗಾಣದ ಮಹಬೂಬ್ನಗರ ಮೂಲದ ಕಟ್ಲಾ ಗಣೇಶ್ ಹಾಗೂ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ವಿಕ್ರಮ್ ಸಿಂಗ್ ಗೊಂಡಾ ಮತ್ತು ಸಂಜಯ್ ಸಿಂಗ್ ಗೊಂಡಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಆಂಧ್ರಪ್ರದೇಶದ ಅನಂತಪುರ ಮೂಲದ ಮಂಚಾಲ ಹೇಮಂತ್ ಮತ್ತು ಮಂಚಾಲ ಶಿವಕುಮಾರ್ ಅವರನ್ನು ರಾಯಚೂರು ಆಸ್ಪತ್ರೆಗೆ (RIMS) ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಳಗಿನ ಜಾವ ಸಂಭವಿಸಿದ ದುರಂತಪೋಲಿಸ್ ಮೂಲಗಳ ಪ್ರಕಾರ, ಕಡೆಚೂರು-ಬಡಿಯಾಳ ಕೈಗಾರಿಕಾ ವಲಯದಲ್ಲಿರುವ ಸಲ್ಫರ್ ಡೈಆಕ್ಸೈಡ್ (Sulphur Dioxide) ರಾಸಾಯನಿಕ ಬಳಸುವ ಕಾರ್ಖಾನೆಯಲ್ಲಿ ಮಂಗಳವಾರ ಮಧ್ಯರಾತ್ರಿ ಅಥವಾ ಬುಧವಾರ ಬೆಳಗಿನ ಜಾವದ ಸುಮಾರಿಗೆ ಇದ್ದಕ್ಕಿದ್ದಂತೆ ಅನಿಲ ಸೋರಿಕೆಯಾಗಿದೆ. ಆ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರಿಗೆ ತಕ್ಷಣ ಉಸಿರಾಟದ ತೊಂದರೆ ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಎಸ್ಪಿ ಪೃಥ್ವಿಕ್ ಶಂಕರ್ ಹೇಳಿಕೆಘಟನೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಪೃಥ್ವಿಕ್ ಶಂಕರ್, “ಬೆಳಗಿನ ಜಾವ ಕಾರ್ಖಾನೆಯಲ್ಲಿ ಸಲ್ಫರ್ ಡೈಆಕ್ಸೈಡ್ ಇರಬಹುದೆಂದು ಶಂಕಿಸಲಾದ ರಾಸಾಯನಿಕ ಅನಿಲ ಸೋರಿಕೆಯಾಗಿದೆ. ಘಟನಾ ಸ್ಥಳದಲ್ಲೇ ಮೂವರು ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಗಾಯಗೊಂಡ ಇಬ್ಬರನ್ನು ರಾಯಚೂರು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

