ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 13 ಆರೋಪಿಗಳ ವಿರುದ್ಧ ಸಿಬಿಐಯಿಂದ 20,000 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿ ಸಲ್ಲಿಕೆ!

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: 13 ಆರೋಪಿಗಳ ವಿರುದ್ಧ ಸಿಬಿಐಯಿಂದ 20,000 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿ ಸಲ್ಲಿಕೆ!

ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹೆಚ್ಚುವರಿ ದಾಖಲೆ ಹಾಗೂ ಹೇಳಿಕೆಗಳನ್ನು ಸಲ್ಲಿಸಲು ಸಿಬಿಐಗೆ 3 ದಿನಗಳ ಕಾಲಾವಕಾಶ ನೀಡಿದ ವಿಶೇಷ ಶಿಘ್ರಗತಿ ನ್ಯಾಯಪೀಠ.

ದೆಹಲಿ (ಜುಲೈ 29): ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ಪರೀಕ್ಷೆ NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಬುಧವಾರ ದೆಹಲಿಯ ರೋಸ್ ಅವೆನ್ಯೂ ವಿಶೇಷ ಶೀಘ್ರಗತಿ ನ್ಯಾಯಾಲಯಕ್ಕೆ ಬರೋಬ್ಬರಿ 20,000 ಪುಟಗಳ ಬೃಹತ್ ದೋಷಾರೋಪಣೆ ಪಟ್ಟಿಯನ್ನು (Charge sheet) ಸಲ್ಲಿಸಿದೆ.

ಪ್ರಕರಣದಲ್ಲಿ ಒಟ್ಟು 13 ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿ ತಯಾರಿಸಲಾಗಿದ್ದು, ದಾಖಲೆಗಳು ಹಾಗೂ ಸಾಕ್ಷಿಗಳ ಹೇಳಿಕೆ ಪಟ್ಟಿಯನ್ನು ಸಲ್ಲಿಸಲು ನ್ಯಾಯಾಲಯವು ಸಿಬಿಐಗೆ 3 ದಿನಗಳ ಕಾಲಾವಕಾಶ ನೀಡಿದೆ. ಪ್ರಕರಣದ ಮುಂದಿನ ಪರಿಶೀಲನಾ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಕಾಯ್ದಿರಿಸಲಾಗಿದೆ.

3 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದ ನ್ಯಾಯಾಲಯ. ​ವಿಶೇಷ ಶೀಘ್ರಗತಿ ನ್ಯಾಯಾಲಯದ ನ್ಯಾಯಾಧೀಶರಾದ ಅನು ಗ್ರೋವರ್ ಬಾಲಿಗಾ ಅವರ ಪೀಠದಲ್ಲಿ ಈ ವಿಚಾರಣೆ ನಡೆಯಿತು. ಸಿಬಿಐ ಪರ ವಕೀಲರು ವಾದ ಮಂಡಿಸಿ, “ಚಾರ್ಜ್‌ಶೀಟ್ ಮತ್ತು ಸಂಬಂಧಿತ ದಾಖಲೆಗಳು ಒಟ್ಟು 20,000 ಪುಟಗಳಷ್ಟು ವಿಸ್ತಾರವಾಗಿವೆ. ಇಷ್ಟೊಂದು ಬೃಹತ್ ಪ್ರಮಾಣದ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ನ್ಯಾಯಾಂಗ ಬಂಧನದಲ್ಲಿರುವ 13 ಆರೋಪಿಗಳಿಗೆ ಒದಗಿಸಬೇಕಾಗಿದೆ. ಹೀಗಾಗಿ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಸಮಯಾವಕಾಶ ಬೇಕು” ಎಂದು ಮನವಿ ಮಾಡಿದರು.

ಸಿಬಿಐ ಮನವಿಯನ್ನು ಆಲಿಸಿದ ನ್ಯಾಯಾಧೀಶರು, ದೋಷಾರೋಪಣೆ ಪಟ್ಟಿಯೊಂದಿಗೆ ಅಗತ್ಯ ಅನುಬಂಧಗಳು (Annexures) ಹಾಗೂ ಸಾಕ್ಷಿಗಳ ವಿವರಗಳನ್ನು ಸಲ್ಲಿಕೆ ಮಾಡಲು 3 ದಿನಗಳ ಕಾಲಾವಕಾಶ ನೀಡಿ ಆದೇಶಿಸಿದರು.

92 ಸ್ಥಳಗಳಲ್ಲಿ ದಾಳಿ, ಬ್ಯಾಂಕ್ ಖಾತೆಗಳು ಜಪ್ತಿ. ​ಮೇ 3, 2026 ರಂದು ನಡೆದ NEET UG ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆ ನೀಡಿ ದೂರಿನನ್ವಯ ಮೇ 12 ರಂದು ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು.​

ತನಿಖೆಯ ಹಾದಿ: 72 ಸಿಬಿಐ ಅಧಿಕಾರಿಗಳು ಹಾಗೂ 8 ಸೈಬರ್ ಫೊರೆನ್ಸಿಕ್ ತಜ್ಞರನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಮಹಾರಾಷ್ಟ್ರ, ರಾಜಸ್ಥಾನ, ಹರ್ಯಾಣ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ 92 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಡಿಜಿಟಲ್ ಉಪಕರಣಗಳು ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.​

ಪ್ರಶ್ನೆಪತ್ರಿಕೆ ಸೋರಿಕೆಯ ಹಿಂದೆ ಕೋಟಿಗಟ್ಟಲೆ ರೂಪಾಯಿ ವ್ಯವಹಾರ ನಡೆದಿರುವುದು ಪತ್ತೆಯಾಗಿದ್ದು, ಆರೋಪಿಗಳ ಅನೇಕ ಬ್ಯಾಂಕ್ ಖಾತೆಗಳು, ಬ್ಯಾಂಕ್ ಲಾಕರ್‌ಗಳು ಹಾಗೂ ಡಿಮ್ಯಾಟ್ ಖಾತೆಗಳನ್ನು ಸಿಬಿಐ ಅಧಿಕಾರಿಗಳು ಈಗಾಗಲೇ ಜಪ್ತಿ ಮಾಡಿದ್ದಾರೆ.

ಅಪರಾಧ ರಾಷ್ಟ್ರೀಯ ಶೈಕ್ಷಣಿಕ