ನವದೆಹಲಿ:ಭಾರತದಲ್ಲಿ ಪ್ರಾಣಾಪಾಯ ಉಂಟುಮಾಡುವ ಡೆಂಗ್ಯೂ ಜ್ವರದ ನಿಯಂತ್ರಣಕ್ಕೆ ಬಹುದೊಡ್ಡ ಮೈಲಿಗಲ್ಲು ಸಿಕ್ಕಿದೆ. ಜಪಾನ್ ಮೂಲದ ಪ್ರಸಿದ್ಧ ಔಷಧ ತಯಾರಿಕಾ ಸಂಸ್ಥೆ ‘ಟಕೆಡಾ ಬಯೋಫಾರ್ಮಾಸ್ಯುಟಿಕಲ್ಸ್’ (Takeda Biopharmaceuticals) ಅಭಿವೃದ್ಧಿಪಡಿಸಿರುವ ‘ಕ್ಯುಡೆಂಗಾ’ (QDENGA) ಡೆಂಗ್ಯೂ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (DCGI) ಮಾರುಕಟ್ಟೆ ಅನುಮೋದನೆ ನೀಡಿದೆ.ಇದರೊಂದಿಗೆ ‘ಕ್ಯುಡೆಂಗಾ’ ಭಾರತದಲ್ಲಿ ಅನುಮೋದನೆ ಪಡೆದ ಅತ್ಯಂತ ಮೊದಲ ಡೆಂಗ್ಯೂ ಲಸಿಕೆ ಎನಿಸಿಕೊಂಡಿದೆ.

DCGI ನ ಮಾರ್ಗಸೂಚಿಯಂತೆ ಈ ಲಸಿಕೆಯನ್ನು 4 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ನೀಡಬಹುದಾಗಿದೆ. ಈ ಹಿಂದೆ ಡೆಂಗ್ಯೂ ಜ್ವರ ಬಂದಿರಲಿ ಅಥವಾ ಬದಿರಿದಿರಲಿ, ಯಾರು ಬೇಕಾದರೂ ಯಾವುದೇ ಪೂರ್ವ ಭಾವಿ ಪರೀಕ್ಷೆಗಳಿಲ್ಲದೆ ಈ ಲಸಿಕೆಯನ್ನು ಪಡೆಯಬಹುದು.ಈ ಲಸಿಕೆಯನ್ನು 3 ತಿಂಗಳ ಅಂತರದಲ್ಲಿ ಒಟ್ಟು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ.
ಕ್ಲಿನಿಕಲ್ ಟ್ರಯಲ್‌ನಲ್ಲಿ ಶೇ. 80ಕ್ಕೂ ಹೆಚ್ಚು ಪರಿಣಾಮಕಾರಿ ಕ್ಯುಡೆಂಗಾ ಲಸಿಕೆಯ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಜಾಗತಿಕವಾಗಿ 28,000ಕ್ಕೂ ಹೆಚ್ಚು ಜನರನ್ನು ಒಳಗೊಂಡ 19 ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲಾಗಿತ್ತು. ಭಾರತದಲ್ಲೂ ‘DEN-302’ ಹಂತ-3ರ ಕ್ಲಿನಿಕಲ್ ಟ್ರಯಲ್ ಪೂರ್ಣಗೊಂಡಿದ್ದು, ಭಾರತೀಯರಲ್ಲೂ ಇದು ಅತ್ಯಂತ ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದು ವರದಿ ದೃಢಪಡಿಸಿದೆ.
ಭಾರತದಲ್ಲಿ ಡೆಂಗ್ಯೂ ಭೀತಿ ಮತ್ತು ಲಸಿಕೆಯ ಪ್ರಾಮುಖ್ಯತೆವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ (WHO) ಪ್ರಪಂಚದಾದ್ಯಂತ ಡೆಂಗ್ಯೂ ಪೀಡಿತ ಪ್ರದೇಶಗಳಲ್ಲಿ ಈ ಲಸಿಕೆಯನ್ನು ಬಳಸಲು ಈಗಾಗಲೇ ಶಿಫಾರಸು ಮಾಡಿದೆ. ಜಾಗತಿಕ ಡೆಂಗ್ಯೂ ಹೊರೆಯ ಮೂರನೇ ಒಂದು ಭಾಗದಷ್ಟು ಪ್ರಕರಣಗಳು ಭಾರತದಲ್ಲೇ ವರದಿಯಾಗುತ್ತಿವೆ. 2025 ರಲ್ಲೇ ಭಾರತದಲ್ಲಿ 1,13,000 ಕ್ಕೂ ಹೆಚ್ಚು ಪ್ರಕರಣಗಳು ಅಧಿಕೃತವಾಗಿ ದಾಖಲಾಗಿದ್ದವು.
ಟಕೆಡಾ ಸಂಸ್ಥೆಯ ಇಂಟರ್‌ಕಾಂಟಿನೆಂಟಲ್ ಮಾರ್ಕೆಟ್ಸ್ ಮುಖ್ಯಸ್ಥ ಡಾ. ಮಹೇಂದರ್ ನಾಯಕ್ ಮಾತನಾಡಿ, “ಭಾರತದಲ್ಲಿ ಡೆಂಗ್ಯೂ ಸಾರ್ವಜನಿಕ ಆರೋಗ್ಯಕ್ಕೆ ಸತತ ಸವಾಲಾಗಿದೆ. ನಮ್ಮ 7 ವರ್ಷಗಳ ಅಧ್ಯಯನವು ಕ್ಯುಡೆಂಗಾ ಲಸಿಕೆಯ ಸುಸ್ಥಿರ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದೆ. ಜಾಗತಿಕವಾಗಿ ಈಗಾಗಲೇ 43 ದೇಶಗಳಲ್ಲಿ ಅನುಮೋದನೆ ಪಡೆದು 3.2 ಕೋಟಿಗೂ ಹೆಚ್ಚು ಡೋಸ್‌ಗಳು ವಿತರಣೆಯಾಗಿವೆ,” ಎಂದು ತಿಳಿಸಿದ್ದಾರೆ.
ಪ್ರಸ್ತುತ ಬ್ರೆಜಿಲ್, ಅರ್ಜೆಂಟೀನಾ, ಕೊಲಂಬಿಯಾ ಮತ್ತು ಇಂಡೋನೇಷ್ಯಾ ದೇಶಗಳ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲಿ ಕ್ಯುಡೆಂಗಾವನ್ನು ಬಳಸಲಾಗುತ್ತಿದ್ದು, ಶೀಘ್ರದಲ್ಲೇ ಭಾರತದಲ್ಲೂ ಸಾರ್ವಜನಿಕ ಹಾಗೂ ಖಾಸಗಿ ವಲಯಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.

