IN vs END 3rd ODI: ಟೀಕಾಕಾರರ ಬಾಯಿ ಮುಚ್ಚಿಸಿದ ‘ಹಿಟ್‌ಮ್ಯಾನ್’ ಸೆಂಚುರಿ; ಆದರೂ ಭಾರತಕ್ಕೆ ತಪ್ಪಲಿಲ್ಲ ಸರಣಿ ಸೋಲಿನ ಆಘಾತ!

IN vs END 3rd ODI: ಟೀಕಾಕಾರರ ಬಾಯಿ ಮುಚ್ಚಿಸಿದ ‘ಹಿಟ್‌ಮ್ಯಾನ್’ ಸೆಂಚುರಿ; ಆದರೂ ಭಾರತಕ್ಕೆ ತಪ್ಪಲಿಲ್ಲ ಸರಣಿ ಸೋಲಿನ ಆಘಾತ!

​ಲಂಡನ್: ತೀವ್ರ ಕುತೂಹಲ ಕೆರಳಿಸಿದ್ದ ಇಂಗ್ಲೆಂಡ್ ವಿರುದ್ಧದ ಅಂತಿಮ ಹಾಗೂ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 27 ರನ್‌ಗಳ ಸೋಲನುಭವಿಸಿದೆ. ಇದರೊಂದಿಗೆ ಆತಿಥೇಯ ಇಂಗ್ಲೆಂಡ್ ತಂಡ 2-1 ಅಂತರದಲ್ಲಿ ಏಕದಿನ ಸರಣಿಯನ್ನು ಮುಡಿಗೇರಿಸಿಕೊಂಡಿದೆ. ಭಾರತದ ಪರ ರೋಹಿತ್ ಶರ್ಮಾ (138) ಭರ್ಜರಿ ಶತಕ ಸಿಡಿಸಿ ಫಾರ್ಮ್‌ಗೆ ಮರಳಿದರೂ, ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಬೆನ್ ಡಕೆಟ್ ಅಬ್ಬರ: ಇಂಗ್ಲೆಂಡ್‌ ಬೃಹತ್ ಮೊತ್ತ​ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಬೆನ್ ಡಕೆಟ್ ಅವರ ಸ್ಫೋಟಕ ಶತಕ (142 ರನ್) ಮತ್ತು ಜೇಕಬ್ ಬೆಥೆಲ್ ಅವರ ಜವಾಬ್ದಾರಿಯುತ ಆಟದ (91 ರನ್) ನೆರವಿನಿಂದ ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 387 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಅಂತಿಮ ಓವರ್‌ಗಳಲ್ಲಿ ಜೋಸ್ ಬಟ್ಲರ್ ಕೇವಲ 13 ಎಸೆತಗಳಲ್ಲಿ 41 ರನ್ ಚಚ್ಚುವ ಮೂಲಕ ಇಂಗ್ಲೆಂಡ್ ತಂಡ ಕೊನೆಯ 5 ಓವರ್‌ಗಳಲ್ಲಿ ದಾಖಲೆಯ 82 ರನ್ ಗಳಿಸಲು ಕಾರಣರಾದರು.

ಟೀಕಾಗಾರರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ ರೋಹಿತ್! ​ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಭದ್ರ ಬುನಾದಿ ಹಾಕಿಕೊಟ್ಟರು. ಇತ್ತೀಚಿನ ದಿನಗಳಲ್ಲಿ ಸತತ ಫಾರ್ಮ್ ಕೊರತೆಯಿಂದ ಟೀಕೆ ಎದುರಿಸುತ್ತಿದ್ದ ರೋಹಿತ್ ಶರ್ಮಾ, ಲಂಡನ್ ಮೈದಾನದಲ್ಲಿ ಅಬ್ಬರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು. ಕೇವಲ 110 ಎಸೆತ ಎದುರಿಸಿದ ರೋಹಿತ್ 17 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 138 ರನ್ ಚಚ್ಚಿದರು.

ಇನ್ನು ರೋಹಿತ್ ಶರ್ಮಾಗೆ ಉತ್ತಮ ಸಾಥ್ ನೀಡಿದ ಶುಭ್‌ಮನ್ ಗಿಲ್ 77 ರನ್ (84 ಎಸೆತ, 10 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾದರು. ಆ ಬಳಿಕ ಬಂದ ವಿರಾಟ್ ಕೊಹ್ಲಿ ಕೂಡ ಆಕರ್ಷಕ ಬ್ಯಾಟಿಂಗ್ ನಡೆಸಿ 60 ಎಸೆತಗಳಲ್ಲಿ 74 ರನ್ (4 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಇಂಗ್ಲೆಂಡ್ ಬೌಲರ್‌ಗಳ ನಿಯಂತ್ರಿತ ದಾಳಿಗೆ ರನ್ ಗಳಿಸಲು ಪರದಾಡಿದ್ದರಿಂದ, ಭಾರತ ತಂಡ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಲಷ್ಟೇ ಶಕ್ತವಾಯಿತು.

ಅಂತರಾಷ್ಟ್ರೀಯ ಕ್ರೀಡೆ