ಚುನಾವಣೆಗಳ ಸಂದರ್ಭದಲ್ಲಿ ನೀಡಲಾದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುತ್ತಿವೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ರಾಜ್ಯ ಸರ್ಕಾರ ಈಗ ಗಂಭೀರ ಚಿಂತನೆ ನಡೆಸಿದೆ. ಅನರ್ಹರ ಪಾಲಾಗುತ್ತಿರುವ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಲು ಸರ್ಕಾರ ಮಹತ್ವದ ಹೆಜ್ಜೆಯಿಡಲು ಮುಂದಾಗಿದೆ.

ರಾಜ್ಯ ಸರ್ಕಾರದ ಐದು ಪ್ರಮುಖ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವುದನ್ನು ತಡೆಯಲು ಫಲಾನುಭವಿಗಳು ತಮ್ಮ ದಾಖಲೆಗಳನ್ನು ಮರುಸಮರ್ಪಿಸುವಂತೆ (Resubmit) ಸೂಚಿಸುವ ಆಲೋಚನೆ ಸರ್ಕಾರದ ಮುಂದಿದೆ ಎಂದು ಅವರು ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಯೋಜನೆಗಳ ದುರುಪಯೋಗಕ್ಕೆ ಸಿಕ್ಕಿದೆ ದಾಖಲೆ ಗ್ಯಾರಂಟಿ ಯೋಜನೆಗಳ ಮರುಪರಿಶೀಲನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್ ಅವರು, ಯೋಜನೆಗಳು ವ್ಯಾಪಕವಾಗಿ ದುರುಪಯೋಗವಾಗುತ್ತಿರುವ ಬಗ್ಗೆ ಸರ್ಕಾರದ ಬಳಿ ನಿಖರ ದಾಖಲೆಗಳಿವೆ ಎಂದು ಹೇಳಿದರು.
”ಅನೇಕ ಫಲಾನುಭವಿಗಳು ಈಗಾಗಲೇ ಮರಣ ಹೊಂದಿದ್ದಾರೆ. ಆದರೂ ಅವರ ಹೆಸರಿನಲ್ಲಿ ಹಣ ಬಿಡುಗಡೆಯಾಗುತ್ತಿದೆ. ಸುಮಾರು 100 ಕೋಟಿ ರೂಪಾಯಿಗೂ ಅಧಿಕ ಹಣ ಅನರ್ಹರ ಪಾಲಾಗುತ್ತಿದ್ದು, ಸರ್ಕಾರದ ಖಜಾನೆಗೆ ನಷ್ಟವಾಗುತ್ತಿದೆ. ಇದರ ಸಂಪೂರ್ಣ ದಾಖಲೆಗಳು ನಮ್ಮ ಬಳಿ ಇವೆ” ಎಂದು ಡಿಸಿಎಂ ವಿವರಿಸಿದರು.
ಅಷ್ಟೇ ಅಲ್ಲದೆ, ಫಲಾನುಭವಿಗಳು ಅರ್ಜಿ ಸಲ್ಲಿಸುವಾಗ ಬೇರೆಯವರ ಮೊಬೈಲ್ ಸಂಖ್ಯೆಗಳನ್ನು ನೀಡಿದ್ದಾರೆ. ಇದರಿಂದಾಗಿ ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳ ಕೈ ಸೇರುತ್ತಿದೆಯೇ ಅಥವಾ ಮಧ್ಯವರ್ತಿಗಳ ಪಾಲಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚುವುದು ಅನಿವಾರ್ಯವಾಗಿದೆ. ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ಪಾರದರ್ಶಕತೆ ತರಲು ಶೀಘ್ರದಲ್ಲೇ ಕಟ್ಟುನಿಟ್ಟಿನ ಪರಿಶೀಲನಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ಅವರು ಸುಳಿವು ನೀಡಿದ್ದಾರೆ.

