ರಕ್ಷಣಾ ರಂಗಕ್ಕೆ ಹೊಸ ಬಲ: ‘ವಾಯು ಅಸ್ತ್ರ’ ಲೋಯಿಟರಿಂಗ್ ಮ್ಯುನಿಷನ್ ಯಶಸ್ವಿ ಪರೀಕ್ಷೆ!

ರಕ್ಷಣಾ ರಂಗಕ್ಕೆ ಹೊಸ ಬಲ: ‘ವಾಯು ಅಸ್ತ್ರ’ ಲೋಯಿಟರಿಂಗ್ ಮ್ಯುನಿಷನ್ ಯಶಸ್ವಿ ಪರೀಕ್ಷೆ!

​ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿತವಾಗಿದೆ. ಪುಣೆ ಮೂಲದ ಖಾಸಗಿ ರಕ್ಷಣಾ ವಲಯದ ಸಂಸ್ಥೆಯಾದ ‘ನಿಬೆ ಲಿಮಿಟೆಡ್’ (Nibe Limited), ತಾನು ಅಭಿವೃದ್ಧಿಪಡಿಸಿರುವ ‘ವಾಯು ಅಸ್ತ್ರ’ (Vayu Astra) ಲೋಯಿಟರಿಂಗ್ ಮ್ಯುನಿಷನ್ (Loitering Munition – ಇದನ್ನು ಸಾಮಾನ್ಯವಾಗಿ ಕಾಮಿಕಾಜೆ ಅಥವಾ ಆತ್ಮಹತ್ಯಾ ಡ್ರೋನ್ ಎನ್ನಲಾಗುತ್ತದೆ) ವ್ಯವಸ್ಥೆಯ ರಕ್ಷಣಾ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಕೇಂದ್ರ ರಕ್ಷಣಾ ಸಚಿವಾಲಯದ ನಿಯಮಾವಳಿಗಳ ಅನ್ವಯ ‘ನೋ-ಕಾಸ್ಟ್, ನೋ-ಕಮಿಟ್‌ಮೆಂಟ್’ (NCNC) ಆಧಾರದ ಮೇಲೆ ಈ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗಿದೆ.

ಪೋಖ್ರಾನ್ ಮತ್ತು ಜೋಶಿಮಠದಲ್ಲಿ ತಾಲೀಮು. ​’ವಾಯು ಅಸ್ತ್ರ’ ಡ್ರೋನ್‌ನ ಸಾಮರ್ಥ್ಯವನ್ನು ದೇಶದ ಎರಡು ವಿಭಿನ್ನ ಮತ್ತು ಅತ್ಯಂತ ಕಠಿಣ ಭೂಪ್ರದೇಶಗಳಲ್ಲಿ ಪರೀಕ್ಷಿಸಲಾಗಿದೆ:

  • ಏಪ್ರಿಲ್ 18 ಮತ್ತು 19: ರಾಜಸ್ಥಾನದ ಪ್ರಸಿದ್ಧ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ಪರೀಕ್ಷೆ ನಡೆಸಲಾಯಿತು.
  • ಏಪ್ರಿಲ್ 26 ಮತ್ತು 27: ಉತ್ತರಾಖಂಡದ ಜೋಶಿಮಠದ (ಮಲಾರಿ) ಅತ್ಯಂತ ಎತ್ತರದ ಹಿಮಾಲಯ ಪ್ರದೇಶದಲ್ಲಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು.

​’ವಾಯು ಅಸ್ತ್ರ’ ಡ್ರೋನ್‌ನ ಪ್ರಮುಖ ವೈಶಿಷ್ಟ್ಯಗಳು

  • ದೂರಗಾಮಿ ಸಾಮರ್ಥ್ಯ: ಈ ಲೋಯಿಟರಿಂಗ್ ಮ್ಯುನಿಷನ್ ಬರೋಬ್ಬರಿ 100 ಕಿಲೋಮೀಟರ್ ದೂರದಲ್ಲಿರುವ ಶತ್ರು ನೆಲೆಗಳನ್ನು ನಿಖರವಾಗಿ ಧ್ವಂಸಗೊಳಿಸಬಲ್ಲದು.
  • ​ಅಪ್ರತಿಮ ನಿಖರತೆ (CEP): ಪೋಖ್ರಾನ್‌ನಲ್ಲಿ ನಡೆದ ದಾಳಿಯ ವೇಳೆ ಕೇವಲ 1 ಮೀಟರ್‌ಗಿಂತ ಕಡಿಮೆ ‘ಸರ್ಕ್ಯುಲರ್ ಎರರ್ ಪ್ರಾಬಬಲ್’ (CEP) ನಿಖರತೆಯೊಂದಿಗೆ ಇದು ಗುರಿಯನ್ನು ತಲುಪಿದೆ. ಅಂದರೆ, ಶತ್ರುಗಳ ತಲೆಯ ಮೇಲೆಯೇ ನೇರವಾಗಿ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ.
  • ​ಅಬಾರ್ಟ್ ಮತ್ತು ರೇ-ಅಟ್ಯಾಕ್ ಸಾಮರ್ಥ್ಯ: ಒಂದು ವೇಳೆ ದಾಳಿಯ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಕೈಬಿಡಬೇಕಾಗಿ ಬಂದರೆ (Abort), ಅದನ್ನು ಹಿಂಪಡೆದು, ಮತ್ತೊಮ್ಮೆ ಶತ್ರುಗಳ ಮೇಲೆ ದಾಳಿ (Re-attack) ಮಾಡುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇದು ಹೊಂದಿದೆ.
  • ರಾತ್ರಿ ವೇಳೆಯೂ ದಾಳಿ: ಇನ್‌ಫ್ರಾರೆಡ್ (IR) ಕ್ಯಾಮೆರಾ ತಂತ್ರಜ್ಞಾನವನ್ನು ಹೊಂದಿರುವ ಈ ವ್ಯವಸ್ಥೆಯು, ಕಗ್ಗತ್ತಲಲ್ಲಿಯೂ ಟ್ಯಾಂಕ್ ನಿರೋಧಕ (Anti-armour) ಕಾರ್ಯಾಚರಣೆಗಳನ್ನು ನಡೆಸಿ, 2 ಮೀಟರ್ ನಿಖರತೆಯಲ್ಲಿ ಶತ್ರುಗಳ ಸೆಂಪ್ರದಾಯಿಕ ಯುದ್ಧ ಟ್ಯಾಂಕುಗಳನ್ನು ಧ್ವಂಸಗೊಳಿಸಿದೆ.
  • ಎತ್ತರದ ಪ್ರದೇಶದಲ್ಲಿ ಹಾರಾಟ: ಉತ್ತರಾಖಂಡದ 14,000 ಅಡಿಗಿಂತಲೂ ಎತ್ತರದ ಗಡಿ ಪ್ರದೇಶದಲ್ಲಿ 90 ನಿಮಿಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ಹಾರಾಟ ನಡೆಸುವ ಮೂಲಕ ತನ್ನ ಸಹಿಷ್ಣುತೆಯನ್ನು (Endurance) ಸಾಬೀತುಪಡಿಸಿದೆ.

ಇಸ್ರೇಲಿ ತಂತ್ರಜ್ಞಾನದ ಸ್ಪರ್ಶ: ಈ ವಾಯು ಅಸ್ತ್ರ ಲೋಯಿಟರಿಂಗ್ ಮ್ಯುನಿಷನ್ ವ್ಯವಸ್ಥೆಯನ್ನು ಇಸ್ರೇಲಿ ರಕ್ಷಣಾ ತಂತ್ರಜ್ಞಾನದ ಮಾದರಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ. ಅಲ್ಲದೆ, ಕಾರ್ಯಾಚರಣೆಯ ಬಳಿಕ ಡ್ರೋನ್ ಅನ್ನು ಸುರಕ್ಷಿತವಾಗಿ ಮರುಪಡೆಯುವ (Recovery) ವ್ಯವಸ್ಥೆಯನ್ನೂ ಇದು ಹೊಂದಿದೆ.

ತಂತ್ರಜ್ಞಾನ ರಾಷ್ಟ್ರೀಯ