ಚೆನ್ನೈ: ಟಿ20 ವಿಶ್ವಕಪ್ನ ಮಹತ್ವದ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್ ರೇಸ್ನಲ್ಲಿ ಜೀವಂತವಾಗಿದ್ದರೂ, ತಂಡದ ಬೌಲಿಂಗ್ ಪ್ರದರ್ಶನದ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಬ್ಯಾಟರ್ಗಳ ಅಬ್ಬರದಿಂದ 4 ವಿಕೆಟ್ ನಷ್ಟಕ್ಕೆ 256 ರನ್ಗಳ ಬೃಹತ್ ಮೊತ್ತ ಪೇರಿಸಿತು. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ ಚೇತರಿಸಿಕೊಂಡ ಭಾರತದ ಬ್ಯಾಟಿಂಗ್ ವಿಭಾಗ ಅದ್ಭುತ ಪ್ರದರ್ಶನ ನೀಡಿತು.
ಬೃಹತ್ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಭಾರತಕ್ಕೆ ಸವಾಲಾಗದಿದ್ದರೂ, ನಿಗದಿತ ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ತಂಡವು ಸುಲಭವಾಗಿ ಗೆದ್ದರೂ, ಬೌಲಿಂಗ್ ವಿಭಾಗದಲ್ಲಿ ಇನ್ನು ಹೆಚ್ಚಿನ ಶಿಸ್ತು ಅಗತ್ಯವಿದೆ ಎಂಬುದು ಕ್ಯಾಪ್ಟನ್ ಸೂರ್ಯ ಅಭಿಪ್ರಾಯ.
”ನಾವು ಬ್ಯಾಟಿಂಗ್ನಲ್ಲಿ ಅದ್ಭುತವಾಗಿ ಆಡಿದ್ದೇವೆ, ಆದರೆ ಬೌಲಿಂಗ್ನಲ್ಲಿ ನಾವು ಇನ್ನೂ ಸ್ಮಾರ್ಟ್ ಆಗಿರಬೇಕಿತ್ತು. ಗೆಲುವು ಮುಖ್ಯವಾದರೂ, ಮುಂಬರುವ ಪಂದ್ಯಗಳಲ್ಲಿ ಸಣ್ಣ ತಪ್ಪುಗಳೂ ನಮಗೆ ಹೊರೆಯಾಗಬಹುದು,” ಎಂದು ಪಂದ್ಯದ ನಂತರ ಸೂರ್ಯಕುಮಾರ್ ಯಾದವ್ ತಿಳಿಸಿದರು.

