ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಂಬಂಧದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪನೆಯಾಗಿದ್ದು, ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿದ್ದ ಕಾರಣಕ್ಕಾಗಿ ಭಾರತದ ಮೇಲೆ ಹೇರಲಾಗಿದ್ದ ಶೇ. 25ರಷ್ಟು ದಂಡನಾತ್ಮಕ ಸುಂಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಹಿಂಪಡೆದಿದ್ದಾರೆ

ಫೆಬ್ರವರಿ 7ರ ಶನಿವಾರದಂದು ಹೊರಡಿಸಲಾದ ಹೊಸ ಕಾರ್ಯಕಾರಿ ಆದೇಶದ ಪ್ರಕಾರ, ಭಾರತವು ಇನ್ನು ಮುಂದೆ ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ವಿಧಿಸಲಾಗಿದ್ದ ಹೆಚ್ಚುವರಿ ತೆರಿಗೆಯನ್ನು ರದ್ದುಗೊಳಿಸಲಾಗಿದೆ.
“ಭಾರತವು ರಷ್ಯಾದ ತೈಲ ಆಮದನ್ನು ನಿಲ್ಲಿಸಲು ಬದ್ಧತೆ ತೋರಿದೆ ಮತ್ತು ಅಮೆರಿಕದಿಂದಲೇ ಹೆಚ್ಚಿನ ಇಂಧನ ಉತ್ಪನ್ನಗಳನ್ನು ಖರೀದಿಸಲು ಒಪ್ಪಿಕೊಂಡಿದೆ. ಅಲ್ಲದೆ, ಮುಂದಿನ 10 ವರ್ಷಗಳ ಕಾಲ ರಕ್ಷಣಾ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಹೊಸ ಚೌಕಟ್ಟಿಗೆ ಸಹಿ ಹಾಕಿದೆ. ಈ ಸಕಾರಾತ್ಮಕ ಬದಲಾವಣೆಗಳನ್ನು ಪರಿಗಣಿಸಿ, ಭಾರತೀಯ ಉತ್ಪನ್ನಗಳ ಮೇಲಿನ ಹೆಚ್ಚುವರಿ ಶೇ. 25ರಷ್ಟು ಸುಂಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸುತ್ತಿದ್ದೇನೆ,” ಎಂದು ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ರಷ್ಯಾ ತೈಲ ಖರೀದಿ ವಿಷಯವಾಗಿ ಅಮೆರಿಕವು ಭಾರತದ ಮೇಲೆ ಶೇ. 50ರ ವರೆಗೆ ಒಟ್ಟು ಸುಂಕವನ್ನು ವಿಧಿಸಿತ್ತು. ಈಗ ಈ ಹೆಚ್ಚುವರಿ ದಂಡ ರದ್ದಾಗಿರುವುದರಿಂದ ಒಟ್ಟಾರೆ ಸುಂಕವು ಶೇ. 18ಕ್ಕೆ ಇಳಿಕೆಯಾಗುವ ಸಾಧ್ಯತೆಯಿದೆ. ಇದು ಭಾರತದ ಜಿಡಿಪಿ ಮತ್ತು ವಿದೇಶಿ ವ್ಯಾಪಾರಕ್ಕೆ ದೊಡ್ಡ ಬಲ ನೀಡಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

