ಇಶಾನ್ ಕಿಶನ್ ಸಿಡಿಲಬ್ಬರದ ಶತಕ, ಅರ್ಶ್‌ದೀಪ್ ಪಂಚ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ಇಶಾನ್ ಕಿಶನ್ ಸಿಡಿಲಬ್ಬರದ ಶತಕ, ಅರ್ಶ್‌ದೀಪ್ ಪಂಚ್: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ!

ತಿರುವನಂತಪುರಂ: ಯುವ ಬ್ಯಾಟರ್ ಇಶಾನ್ ಕಿಶನ್ ಅವರ ಚೊಚ್ಚಲ ಅಬ್ಬರದ ಶತಕ ಹಾಗೂ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ 46 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಭಾರತ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ.

ಕಿಶನ್-ಸೂರ್ಯ ಅಬ್ಬರ: ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಇಶಾನ್ ಕಿಶನ್ ಅವರ ಸ್ಫೋಟಕ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಕಿಶನ್ ಕೇವಲ 43 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 103 ರನ್ ಚಚ್ಚಿದರು. ಇವರಿಗೆ ಸಾಥ್ ನೀಡಿದ ನಾಯಕ ಸೂರ್ಯಕುಮಾರ್ ಯಾದವ್ ಕೇವಲ 30 ಎಸೆತಗಳಲ್ಲಿ 63 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಆದರೆ, ತವರಿನಲ್ಲಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟಾಗಿ ನಿರಾಸೆ ಮೂಡಿಸಿದರು.

ಬೃಹತ್ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿತು. ಅರ್ಶ್‌ದೀಪ್ ಸಿಂಗ್ 5 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ಅಂತಿಮವಾಗಿ ನ್ಯೂಜಿಲೆಂಡ್ ಹೋರಾಟ ನಡೆಸಿ ಸೋಲೊಪ್ಪಿಕೊಂಡಿತು.

ಟಿ20 ವಿಶ್ವಕಪ್ ಸಮರಕ್ಕೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾಗೆ ಈ ಸರಣಿ ಗೆಲುವು ಹೆಚ್ಚಿನ ಆತ್ಮವಿಶ್ವಾಸ ನೀಡಿದೆ.

ಅಂತರಾಷ್ಟ್ರೀಯ ಕ್ರೀಡೆ ರಾಷ್ಟ್ರೀಯ