ಬೆಂಗಳೂರು ಟು ಕನ್ಯಾಕುಮಾರಿ: 702 ಕಿ.ಮೀ ಸೈಕಲ್ ತುಳಿದು ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್; ಪ್ರಧಾನಿ ಮೋದಿ ಮೆಚ್ಚುಗೆ

ಬೆಂಗಳೂರು ಟು ಕನ್ಯಾಕುಮಾರಿ: 702 ಕಿ.ಮೀ ಸೈಕಲ್ ತುಳಿದು ಅಚ್ಚರಿ ಮೂಡಿಸಿದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್; ಪ್ರಧಾನಿ ಮೋದಿ ಮೆಚ್ಚುಗೆ

ಅನಾರೋಗ್ಯವನ್ನು ಮೆಟ್ಟಿ ನಿಂತು, 70ರ ಹರೆಯದಲ್ಲೂ ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ 702 ಕಿಲೋಮೀಟರ್ ಸೈಕಲ್ ಜಾಥಾ ನಡೆಸಿದ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್ ಅವರ ಸಾಹಸಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಷ್ ಎಂದಿದ್ದಾರೆ.

ಗುರುವಾರ ಸುರೇಶ್ ಕುಮಾರ್ ಅವರಿಗೆ ದೂರವಾಣಿ ಕರೆ ಮಾಡಿದ ಪ್ರಧಾನಿಗಳು, ಅವರ ಫಿಟ್ನೆಸ್ ಬದ್ಧತೆಯನ್ನು ಶ್ಲಾಘಿಸಿದರು.

ಪ್ರಧಾನಿ ಮೋದಿ ಅಭಿನಂದನೆ ಈ ಕುರಿತು ಎಕ್ಸ್ (ಟ್ವಿಟರ್) ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಶ್ರೀ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲ್ ಮೂಲಕ ಪ್ರಯಾಣಿಸಿರುವುದು ಅತ್ಯಂತ ಶ್ಲಾಘನೀಯ ಮತ್ತು ಸ್ಪೂರ್ತಿದಾಯಕ. ಗಂಭೀರ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಅವರು ಈ ಸಾಧನೆ ಮಾಡಿರುವುದು ಅವರ ದೃಢ ಸಂಕಲ್ಪಕ್ಕೆ ಸಾಕ್ಷಿ. ಇದು ದೇಶಕ್ಕೆ ಫಿಟ್ನೆಸ್ ಬಗ್ಗೆ ಮಹತ್ವದ ಸಂದೇಶ ನೀಡುತ್ತದೆ” ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿಗಳ ಕರೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ತೀವ್ರ ಅನಾರಗ್ಯದಿಂದ ಗುಣಮುಖನಾದ ಮೇಲೆ 51 ವರ್ಷಗಳ ನಂತರ ಮತ್ತೆ ಕನ್ಯಾಕುಮಾರಿಗೆ ಸೈಕಲ್ ತುಳಿದಿರುವುದು ಪ್ರಧಾನಿಗಳಿಗೆ ಸಂತಸ ತಂದಿದೆ,” ಎಂದು ಅವರು ತಿಳಿಸಿದ್ದಾರೆ.

ಅಣ್ಣಾಮಲೈ ಶ್ಲಾಘನೆ – ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ಸುರೇಶ್ ಕುಮಾರ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. “ಹಿನ್ನಡೆಗಳು ತಾತ್ಕಾಲಿಕ, ಆದರೆ ಧೈರ್ಯ ಮತ್ತು ಶಿಸ್ತು ಶಾಶ್ವತ ಎಂಬುದನ್ನು ಸುರೇಶ್ ಕುಮಾರ್ ಅವರು ಸಾಬೀತುಪಡಿಸಿದ್ದಾರೆ. ಫಿಟ್ನೆಸ್ ಮತ್ತು ಸಾರ್ವಜನಿಕ ನಾಯಕತ್ವ ಹೇಗೆ ಒಟ್ಟಿಗೆ ಸಾಗಬಹುದು ಎಂಬುದಕ್ಕೆ ಅವರೇ ಸಾಕ್ಷಿ,” ಎಂದು ಬಣ್ಣಿಸಿದ್ದಾರೆ.

ಒಟ್ಟಾರೆಯಾಗಿ, ವಯಸ್ಸು ಕೇವಲ ಸಂಖ್ಯೆ ಎಂಬುದನ್ನು ಸುರೇಶ್ ಕುಮಾರ್ ಅವರು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಆರೋಗ್ಯ ಮತ್ತು ಸೌಂದರ್ಯ ರಾಜಕೀಯ ರಾಜ್ಯ ರಾಷ್ಟ್ರೀಯ