ಬೆಂಗಳೂರು (ಮೇ 31): ಕರ್ನಾಟಕ ರಾಜಕೀಯದಲ್ಲಿ ಬಹುದೊಡ್ಡ ಬದಲಾವಣೆ ಪರ್ವ ಆರಂಭವಾಗಿದೆ. ರಾಜ್ಯದ ಮುಂದಿನ ನೂತನ ಮುಖ್ಯಮಂತ್ರಿಯಾಗಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೂನ್ 3 ರಂದು ರಾಜಧಾನಿ ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಅವರು ಕರ್ನಾಟಕದ 23ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಿದ್ದರಾಮಯ್ಯ ಅವರಿಂದಲೇ ಹೆಸರು ಪ್ರಸ್ತಾಪ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಂದಿನ ಸಿಎಲ್‌ಪಿ ನಾಯಕ ಸ್ಥಾನಕ್ಕೆ ಪ್ರಸ್ತಾಪಿಸಿದರು. ಹಿರಿಯ ನಾಯಕ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಈ ಪ್ರಸ್ತಾಪವನ್ನು ಅನುಮೋದಿಸಿದರು. ತದನಂತರ ಸಭೆಯಲ್ಲಿದ್ದ ಎಲ್ಲಾ 136 ಕಾಂಗ್ರೆಸ್ ಶಾಸಕರು ಒಮ್ಮತದಿಂದ ‘ಕನಕಪುರ ಬಂಡೆ’ ಖ್ಯಾತಿಯ ಡಿ.ಕೆ. ಶಿವಕುಮಾರ್ ಅವರನ್ನು ತಮ್ಮ ನಾಯಕನನ್ನಾಗಿ ಆರಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ಈ ಸಂಪೂರ್ಣ ಪ್ರಕ್ರಿಯೆ ಯಶಸ್ವಿಯಾಗಿ ಜರುಗಿತು.
ಜನರ ಸೇವೆಗೆ ಬದ್ಧ: ಡಿ.ಕೆ. ಶಿವಕುಮಾರ್ ಭಾವುಕ ಪೋಸ್ಟ್ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬೆನ್ನಲ್ಲೇ ತಮ್ಮ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು,”ಇಂದು ವಿಧಾನಸೌಧದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದಕ್ಕೆ ಅತ್ಯಂತ ನಮ್ರತೆಯಿಂದ ಕೃತಜ್ಞತೆ ಸಲ್ಲಿಸುತ್ತೇನೆ. ರಾಜ್ಯದ ಜನರ ಸೇವೆಗಾಗಿ ಸಂಪೂರ್ಣ ಸಮರ್ಪಣಾ ಭಾವ, ಪ್ರಾಮಾಣಿಕತೆ ಮತ್ತು ನಿಶ್ಚಿತ ಧೇಯದೊಂದಿಗೆ ಕೆಲಸ ಮಾಡಲು ನಾವು ಬದ್ಧರಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಧೀಮಂತ ಸಂಘಟಕ, ‘ಟ್ರಬಲ್ ಶೂಟರ್’ ಎಂದೇ ಹೆಸರಾಗಿರುವ 64 ವರ್ಷದ ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರ ಸುದೀರ್ಘ ರಾಜಕೀಯ ಹೋರಾಟಕ್ಕೆ ಕೊನೆಗೂ ಮುಖ್ಯಮಂತ್ರಿ ಹುದ್ದೆಯ ಗರಿ ಲಭಿಸಿದಂತಾಗಿದೆ. ಸಿದ್ದರಾಮಯ್ಯ ಅವರ ರಾಜೀನಾಮೆಯ ನಂತರ ರಾಜ್ಯದಲ್ಲಿ ಸುಸೂತ್ರವಾಗಿ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಿದೆ.

