ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಹೇಳಿಕೆಯೊಂದನ್ನು ನೀಡಿದ್ದಾರೆ. “ನಾವು ಶೀಘ್ರದಲ್ಲೇ ದೊಡ್ಡ ವಿಜಯವನ್ನು ಸಾಧಿಸಲಿದ್ದೇವೆ” ಎಂದು ಘೋಷಿಸಿರುವ ಅವರು, ಇರಾನ್ ದೇಶದ ನೌಕಾಪಡೆ ಈಗ ಸಂಪೂರ್ಣವಾಗಿ ನಾಶವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ಮಿಲಿಟರಿ ಶಕ್ತಿಯನ್ನು ಶ್ಲಾಘಿಸಿದರು. “ನಮಗೆ ಶೀಘ್ರದಲ್ಲೇ ಜಯ ಸಿಗಲಿದೆ. ಇರಾನ್ ಈಗ ಅತ್ಯಂತ ದುರ್ಬಲ ಸ್ಥಿತಿಯಲ್ಲಿದೆ. ಇರಾನ್ ಬಳಿ ಈಗ ನೌಕಾಪಡೆಯೇ ಉಳಿದಿಲ್ಲ, ಅವರ 158 ಹಡಗುಗಳು ಈಗ ಸಮುದ್ರದ ತಳ ಸೇರಿವೆ” ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ನೆವಾಡಾದ ಲಾಸ್ ವೇಗಾಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇರಾನ್ ವಿರುದ್ಧದ ಸಂಘರ್ಷದಲ್ಲಿ ಅಮೆರಿಕ “ಅತಿ ಶೀಘ್ರದಲ್ಲೇ ವಿಜಯ” ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸೋಲೆಮನಿ ಕುರಿತು ಉಲ್ಲೇಖ:
ಇದೇ ಸಂದರ್ಭದಲ್ಲಿ ಇರಾನ್‌ನ ಕಮಾಂಡರ್ ಆಗಿದ್ದ ಘೋಷಿತ ಭಯೋತ್ಪಾದಕ ಸೋಲೆಮನಿ ಹತ್ಯೆಯನ್ನು ಟ್ರಂಪ್ ನೆನಪಿಸಿಕೊಂಡರು. “ಸೋಲೆಮನಿ ಅಮೆರಿಕದ ಅನೇಕ ಸೈನಿಕರ ಸಾವಿಗೆ ಮತ್ತು ಅಂಗವೈಕಲ್ಯಕ್ಕೆ ಕಾರಣವಾಗಿದ್ದ. ಅಂತಹ ಕ್ರೂರ ಭಯೋತ್ಪಾದಕನನ್ನು ನಮ್ಮ ಪಡೆಗಳು ಹೊಡೆದುರುಳಿಸಿವೆ” ಎಂದು ಅವರು ಹೇಳಿದರು.
ಒಪ್ಪಂದಕ್ಕೆ ಇರಾನ್ ಉತ್ಸುಕ:
ಪ್ರಸ್ತುತ ನಡೆಯುತ್ತಿರುವ ಸಂಘರ್ಷದ ನಡುವೆಯೂ ಇರಾನ್ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ ಎಂದು ಟ್ರಂಪ್ ತಿಳಿಸಿದರು. “ಅಣ್ವಸ್ತ್ರ ಮುಕ್ತ ಇರಾನ್ ನಮ್ಮ ಗುರಿ. ಈ ನಿಟ್ಟಿನಲ್ಲಿ ಮಾತುಕತೆಗಳು ಪ್ರಗತಿಯಲ್ಲಿದ್ದು, ಬಹುಶಃ ಈ ವಾರಾಂತ್ಯದಲ್ಲಿ ಒಂದು ನಿರ್ಧಾರಕ್ಕೆ ಬರಬಹುದು. ಒಂದು ವೇಳೆ ಒಪ್ಪಂದ ಯಶಸ್ವಿಯಾಗದಿದ್ದರೆ ಮತ್ತೆ ಹೋರಾಟ ಮುಂದುವರಿಯಲಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ಆಯಕಟ್ಟಿನ ಕಾರ್ಯಾಚರಣೆಗಳಿಂದಾಗಿ ಇರಾನ್‌ನ ಮಿಲಿಟರಿ ಸಾಮರ್ಥ್ಯವು ತೀವ್ರವಾಗಿ ಕುಸಿದಿದೆ ಎಂದು ಟ್ರಂಪ್ ವಿಶ್ಲೇಷಿಸಿದ್ದಾರೆ.

