ಸುಳ್ಯದಲ್ಲಿ ಡಿ. 31ಕ್ಕೆ ‘ಪಂಚಗವ್ಯ’ ಏಕವ್ಯಕ್ತಿ ರಂಗ ವೈಭವ ಅಪ್ರತಿಮ ಬಾಲಕರ ಪರ್ವದ ಅನಾವರಣ

ಸುಳ್ಯದಲ್ಲಿ ಡಿ. 31ಕ್ಕೆ ‘ಪಂಚಗವ್ಯ’ ಏಕವ್ಯಕ್ತಿ ರಂಗ ವೈಭವ ಅಪ್ರತಿಮ ಬಾಲಕರ ಪರ್ವದ ಅನಾವರಣ

ಸುಳ್ಯ, ಡಿಸೆಂಬರ್ 30: ಭಾರತೀಯ ಪುರಾಣದ ಐವರು ಅಪ್ರತಿಮ ಬಾಲಕರ ಸಾಹಸ ಮತ್ತು ಜ್ಞಾನದ ಕಥೆಗಳನ್ನು ಒಳಗೊಂಡ ‘ಪಂಚಗವ್ಯ’ ಎಂಬ ವಿಶಿಷ್ಟ ಏಕವ್ಯಕ್ತಿ ರಂಗ ಪ್ರಯೋಗವು ಇದೇ ಡಿಸೆಂಬರ್ 31ರಂದು ಸಂಜೆ 6 ಗಂಟೆಗೆ ಸುಳ್ಯದ ಸಿ. ಎ. ಬ್ಯಾಂಕ್ ಆವರಣದ ಎ. ಎಸ್. ವಿಜಯಕುಮಾರ್ ಸಭಾಭವನದಲ್ಲಿ ಪ್ರದರ್ಶನಗೊಳ್ಳಲಿದೆ.

ವಿಶಿಷ್ಟ ರಂಗ ಪ್ರಯೋಗ: ಈ ನಾಟಕವು ಪ್ರಹ್ಲಾದನ ಅನನ್ಯ ಶ್ರದ್ಧೆ, ನಚಿಕೇತನ ದೃಢತೆ, ಬಾಲಕ ಧ್ರುವನ ದೃಢಸಂಕಲ್ಪ, ಅಷ್ಟಾವಕ್ರನ ಅಪ್ರತಿಮ ಹೋರಾಟ ಹಾಗೂ ಬಾಲ ಶಂಕರಾಚಾರ್ಯರ ಅನುಪಮ ಜ್ಞಾನ ಭಂಡಾರವನ್ನು “ಪಂಚಮುಖಿ”ಯಾಗಿ ಅನಾವರಣಗೊಳಿಸಲಿದೆ. ಈ ಐದು ಜ್ಞಾನ ಶೃಂಗಗಳನ್ನು ಒಂದೇ ಗುಚ್ಛವನ್ನಾಗಿಸಿ ಕೇವಲ 90 ನಿಮಿಷಗಳಲ್ಲಿ ಪ್ರಸ್ತುತಪಡಿಸುತ್ತಿರುವುದು ಈ ಪ್ರಯೋಗದ ವಿಶೇಷತೆಯಾಗಿದೆ.

ಈ ವಿಶಿಷ್ಟ ರಂಗ ಪ್ರಯೋಗದಲ್ಲಿ ಕಲಾವಿದ ಗೋಕುಲ ಸಹೃದಯ ಅವರು ರಂಗದ ಮೇಲೆ ಅಭಿನಯಿಸಲಿದ್ದಾರೆ. ಈ ನಾಟಕದ ರಚನೆ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನ ಪ್ರಸಿದ್ಧ ರಂಗಕರ್ಮಿ ಡಾ|| ಎಸ್. ಎಲ್. ಎನ್. ಸ್ವಾಮಿ ಅವರು ನಿರ್ವಹಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಸಂಘಟಕರಾದ ಡಾ. ವೀಣಾ ಎನ್ ಅವರು, “ವರ್ಷದ ಕೊನೆಯ ದಿನದಂದು ಇಂತಹ ಸ್ಫೂರ್ತಿದಾಯಕ ಕಥೆಗಳನ್ನು ರಂಗದ ಮೇಲೆ ತರುತ್ತಿರುವುದು ಸಂತಸದ ವಿಷಯ. ರಂಗಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಅಪರೂಪದ ಕಲಾ ವೈಭವವನ್ನು ಆಸ್ವಾದಿಸಬೇಕು” ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಾದೇಶಿಕ ಮನೋರಂಜನೆ