ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣದ ತನಿಖೆ ನಡುವೆ ಮಹತ್ವದ ಬೆಳವಣಿಗೆ ಸಂಭವಿಸಿದೆ. ಈ ಪ್ರಕರಣವನ್ನು ತನಿಖೆ ಮಾಡುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ)ಗೆ ರಾಜ್ಯ ಸರ್ಕಾರ ಪೊಲೀಸ್ ಠಾಣೆಯ ಅಧಿಕಾರ ನೀಡಿದೆ. ಇದರೊಂದಿಗೆ ಎಸ್ಐಟಿಗೆ ಸ್ವತಂತ್ರವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವ ಹಾಗೂ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸುವ ಅವಕಾಶ ಕಲ್ಪಿಸಲಾಗಿದೆ.
ಧರ್ಮಸ್ಥಳದ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ಉತ್ಖನನ ಕಾರ್ಯಾಚರಣೆ ನಡೆಸುತ್ತಿರುವ ಎಸ್ಐಟಿ, ಇತ್ತೀಚೆಗೆ ಬಂಗ್ಲಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರ ಪತ್ತೆಹಚ್ಚಿತ್ತು. ಮತ್ತೊಬ್ಬ ದೂರುದಾರ ಜಯನ್ ಬಾಲಕಿ ಶವ ಹೂತಿಟ್ಟಿರುವ ಆರೋಪದ ಮೇಲೂ ತನಿಖೆ ಪ್ರಾರಂಭವಾಗಿದೆ. ಪ್ರಕರಣದಲ್ಲಿ ಹೆಚ್ಚುತ್ತಿರುವ ದೂರುಗಳು ಹಾಗೂ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಎಸ್ಐಟಿಗೆ ವಿಶೇಷ ಅಧಿಕಾರ ನೀಡಿ, ತನಿಖಾ ತಂಡದಲ್ಲಿರುವ ನಿರೀಕ್ಷಕ ಹುದ್ದೆಯ ಅಧಿಕಾರಿಯನ್ನು ಠಾಣಾಧಿಕಾರಿಯಾಗಿ ಘೋಷಿಸಿದೆ. ಬಿಎನ್ಎಸ್ಎಸ್ 2023ರ ಕಲಂ 2(1)(u) ಮತ್ತು 2(1)(r) ಅಡಿಯಲ್ಲಿ ಈ ಆದೇಶ ಹೊರಡಿಸಲಾಗಿದೆ.

