ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಮಾನಹಾನಿಕರ ವರದಿ ಪ್ರಸಾರ ಮಾಡುವ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಧರ್ಮಸ್ಥಳ ದೇವಸ್ಥಾನದ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಸಲ್ಲಿಸಿದ್ದ ಮೇಲ್ಮನವಿಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ.
ವಾಕ್ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ಪೀಠ, ಗ್ಯಾಗ್ ಆರ್ಡರ್ ನೀಡಲು ನಿರಾಕರಿಸಿದೆ. ‘ಹರ್ಷೇಂದ್ರ ಕುಮಾರ್ ಡಿ. ವರ್ಸಸ್ ಕುಡ್ಲ ರಾಂಪೇಜ್ ಮತ್ತು ಇತರರು’ ಪ್ರಕರಣದ ವಿಚಾರಣೆ ವೇಳೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ ನ್ಯಾಯಾಲಯ, ಬೆಂಗಳೂರಿನ ವಿಚಾರಣಾ ನ್ಯಾಯಾಲಯವು ಎರಡು ವಾರಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದೆ.
ದೇವಸ್ಥಾನದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ವಾಹಿನಿಗಳಲ್ಲಿ ಪ್ರತಿದಿನ ಅವಹೇಳನಕಾರಿ ವರದಿಗಳು, ಮೀಮ್‌ಗಳು ಹರಿದಾಡುತ್ತಿದ್ದು, ಸಂಸ್ಥೆಯ ಘನತೆಗೆ ಧಕ್ಕೆಯಾಗುತ್ತಿದೆ ಎಂದು ತಿಳಿಸಿ ಮಧ್ಯಂತರ ರಕ್ಷಣೆಯನ್ನು ಕೋರಿ ಮನವಿ ಮಾಡಿದರು.
ಆದರೆ, ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಇಂತಹ ನಿರ್ಬಂಧ ವಿಧಿಸಬಹುದು, ವರದಿ ಪ್ರಸಾರವನ್ನು ತಡೆಯುವುದು ಸರಿಯಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಮಾನಹಾನಿಯಿಂದ ನಷ್ಟ ಉಂಟಾದರೆ ದೇವಸ್ಥಾನವು ಪರಿಹಾರ ಕೋರಲು ಅವಕಾಶವಿದೆ ಎಂದು ಪೀಠ ತಿಳಿಸಿದೆ.

