ಭಕ್ತರ ಹರ್ಷೋದ್ಘಾರದ ನಡುವೆ ತಲಕಾವೇರಿಯಲ್ಲಿ ತೀರ್ಥೋದ್ಭವ

ಭಕ್ತರ ಹರ್ಷೋದ್ಘಾರದ ನಡುವೆ ತಲಕಾವೇರಿಯಲ್ಲಿ ತೀರ್ಥೋದ್ಭವ

ಮಡಿಕೇರಿ ಅ.18 : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ನಿಗದಿಗಿಂತ ಒಂದು ನಿಮಿಷ ಮುಂಚಿತವಾಗಿ ನಸುಕಿನ 1.26 ಗಂಟೆಗೆ ಕರ್ಕಾಟಕ ಲಗ್ನದಲ್ಲಿ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವವಾಯಿತು. ಭಕ್ತರ ಜಯಘೋಷ, ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಂಡಳು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು, ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಠಾಧೀಶರು ಮತ್ತಿತರ ಗಣ್ಯರು ತೀರ್ಥೋದ್ಭವದ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು. ನಸುಕಿನ ವೇಳೆ ತೀರ್ಥೋದ್ಭವವಾದರು ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಾಗಮಂಡಲ ಕ್ಷೇತ್ರಕ್ಕೆ ಆಗಮಿಸಿ ಶ್ರೀಭಗಂಡೇಶ್ವರನಿಗೆ ಪೂಜೆ ಸಲ್ಲಿಸಿದರು. ನಂತರ ಕಾಲ್ನಡಿಗೆಯ ಮೂಲಕ ಕಾವೇರಿ ಮಾತೆಯ ಸ್ಮರಣೆಯೊಂದಿಗೆ ತಲಕಾವೇರಿಗೆ ತೆರಳಿದರು. ನೆರೆದಿದ್ದ ಭಕ್ತರಿಗೆ ಕೊಡಗು ಏಕೀಕರಣ ರಂಗದ ವತಿಯಿಂದ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

ರಾಜ್ಯ