ಉರಿಗೌಡ-ನಂಜೇಗೌಡ ವಿವಾದ: ಸಚಿವ ಮುನಿರತ್ನಗೆ ಸ್ವಾಮೀಜಿಯವರು ಹೇಳಿದ ಮಾತುಗಳೇನು..?

ಉರಿಗೌಡ-ನಂಜೇಗೌಡ ವಿವಾದ: ಸಚಿವ ಮುನಿರತ್ನಗೆ ಸ್ವಾಮೀಜಿಯವರು ಹೇಳಿದ ಮಾತುಗಳೇನು..?

ಉರಿಗೌಡ ಮತ್ತು ದೊಡ್ಡನಂಜೇಗೌಡ ವಿಚಾರದಲ್ಲಿ ಹಲವಾರು ದಿನಗಳಿಂದ ಗೊಂದಲಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಸಚಿವ ಮುನಿರತ್ನ ಸಿನಿಮಾ ಮಾಡುತ್ತಿರುವ ವಿಚಾರ ತಿಳಿದು ಅವರನ್ನು ಕರೆದು ಮಾಹಿತಿ ಪಡೆದಿದ್ದೇನೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೊಮ್ಮೇರಹಳ್ಳಿ ವಿಶ್ವಮಾನವ ಶಿಕ್ಷಣ ಸಂಸ್ಥೆಗೆ ಆಗಮಿಸಿದ ಚಿತ್ರದ ನಿರ್ಮಾಪಕರೂ ಆದ ಸಚಿವ ಮುನಿರತ್ನರೊಂದಿಗೆ ಮಾತುಕತೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ , ಐತಿಹಾಸಿಕ ಹಿನ್ನೆಲೆ ಸ್ಪಷ್ಟತೆ ಇಲ್ಲದಿರುವುದನ್ನು ಸಿನಿಮಾ ಮಾಡುವುದು ಸೂಕ್ತ ಅಲ್ಲ. ಒಂದು ಸಮುದಾಯದ ಅಸ್ಮಿತೆ ಮತ್ತು ಪ್ರತಿನಿಧಿ ಮಾಡುತ್ತಿರುವ ವ್ಯಕ್ತಿಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವುದು ಸರಿಯಲ್ಲ ಎಂದು ಸಲಹೆ ನೀಡಿದ್ದೇನೆ ಎಂದರು.
ಯಾರಿಗೂ ನೋವು ಮಾಡುವ ಉದ್ದೇಶ ನನ್ನದಲ್ಲ. ಈ ಸಿನಿಮಾವನ್ನು ಇವತ್ತಲ್ಲ, ಎಂದಿಗೂ ಮಾಡಲ್ಲವೆಂದು ಮುನಿರತ್ನ ಹೇಳಿದ್ದಾರೆ. ಸರಿಯಾದ ಸಂಶೋಧನೆ ಆಗದೆ ಎಲ್ಲಿ ಬೇಕಲ್ಲಿ ಮಾತನಾಡುವುದು ಸೂಕ್ತ ಅಲ್ಲ. ಇತಿಹಾಸವನ್ನು ಸರಿಯಾಗಿ ಅರಿತವನು ಮತ್ತೊಂದು ಇತಿಹಾಸ ಸೃಷ್ಟಿ ಮಾಡಲು ಸಾಧ್ಯ. ಇತಿಹಾಸ ಅರಿಯಲು ಆಯಾ ಕಾಲದ ಶಿಲಾ ಶಾಸನಗಳು, ತಾಳೆಗರಿಗಳು, ಅಥವಾ ಆ ಕಾಲದ ವ್ಯಕ್ತಿಗಳು ಬರೆದ ಚರಿತ್ರೆಗಳಿವೆ. ಇಷ್ಟು ಇಲ್ಲದೇ ಏನೇ ಬರೆದರು ಸಾಕಷ್ಟು ಗೊಂದಲ ಹಾಗೂ ಅನುಮಾನಕ್ಕೆ ಕಾರಣವಾಗುತ್ತದೆ ಎಂದು ಚುಂಚಶ್ರೀ ತಿಳಿಸಿದರು.

ಉರಿಗೌಡ ಮತ್ತು ದೊಡ್ಡ ನಂಜೇಗೌಡ ಕುರಿತು ಮಾತನಾಡುತ್ತಿದ್ದವರಿಗೆ ಸಲಹೆ ನೀಡಿದ್ದೇನೆ. ಸಿ.ಟಿ.ರವಿ, ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ್‌, ಕೆ.ಗೋಪಾಲಯ್ಯ ಸೇರಿದಂತೆ ಹಲವರಿಗೆ ಸಲಹೆ ನೀಡಲಾಗಿದೆ. ಇನ್ನು ಮುಂದೆ ಈ ವಿಚಾರ ಚರ್ಚಿಸದಂತೆ, ಸುಮ್ಮನಾಗುವಂತೆ ಹೇಳಿದ್ದೇನೆ. ಕಲ್ಪನೆ ಮಾಡಿ ಬರೆಯುವುದು ಕಾದಂಬರಿ. ಶಾಸನ ಮತ್ತು ಇತಿಹಾಸ ಹಿನ್ನೆಲೆ ಮುಂದಿನ ಪೀಳಿಗೆಗೆ ಶಕ್ತಿ. ಅಂತಹ ಕುರುಹು ಇದುವರೆಗೂ ಕಂಡು ಬಾರದೆ ಇರುವುದರಿಂದ ಹೇಳಿಕೆ ನೀಡಿದರೆ ಗೊಂದಲ ಸೃಷ್ಟಿಯಾಗುತ್ತದೆ. ಯುವಕರು ಗೊಂದಲಕ್ಕೀಡಾಗುವುದರ ಜೊತೆಗೆ ಸಮುದಾಯದವನ್ನು ಹಾಳು ಮಾಡಬಾರದು ಎಂದು ಸಲಹೆ ನೀಡಿದರು

ಉರಿಗೌಡ ಮತ್ತು ನಂಜೇಗೌಡ ಸಿನಿಮಾ ಮಾಡಲ್ಲ

ಸ್ವಾಮೀಜಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ನಾನು ಸ್ವಾಮೀಜಿ ಅವರಿಗೆ ಯಾವುದೇ ಕಾರಣಕ್ಕೂ ಈ ಸಿನಿಮಾ ಮಾಡಲ್ಲ ಎಂದು ಮಾತು ಕೊಟ್ಟಿದ್ದೇನೆ. ಮೇ.14ರಂದು ಚಿತ್ರೀಕರಣದ ಮೂಹೂರ್ತ ಮಾಡಬೇಕು ಎನ್ನಲಾಗಿತ್ತು. ಬಹಳ ದೊಡ್ಡ ಸಿನಿಮಾ ಮಾಡಬೇಕು ನಿರ್ಧರಿಸಲಾಗಿತ್ತು. ಮೈಸೂರು ಸಂಸ್ಥಾನ ಹಾಗೂ ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗಿತ್ತು ಎಂದು ಹೇಳಿದರು.
ಇನ್ನು ಕುಮಾರಸ್ವಾಮಿ ಅವರು ಮುನಿರತ್ನನಿಗೆ ಡಾ.ಸಿ.ಎನ್.ಅಶ್ವತ್ಥ್‌ ನಾರಾಯಣ್‌ ಸಿನಿಮಾ ಮಾಡಲು ಹೇಳಿರಬೇಕು ಎಂದಿದ್ದರು. ಅಲ್ಲಿಯವರೆಗೆ ನನಗೆ ಆಲೋಚನೆ ಇರಲಿಲ್ಲ. ಉರಿಗೌಡ ಮತ್ತು ದೊಡ್ಡನಂಜೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ, ಒಂದಷ್ಟು ಸಿಗುತ್ತಿಲ್ಲ. ನನಗೆ ಚಿತ್ರ ಮಾಡಬೇಕು ಅನಿಸಿತು. ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದೆಂದು ಆಗ ನನಗೆ ಅನಿಸಿತು ಎಂದಿದ್ದಾರೆ.
ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ, ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ ಸಿನಿಮಾ ಇಲ್ಲಿಯೇ ಕೈ ಬಿಡುತ್ತೇನೆ. ಬಿಜೆಪಿಯವನು ಅಂತಾ ನಾನು ಈ ಸಿನಿಮಾ ಮಾಡಲು ಹೋಗಲ್ಲ. ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಚನೆ ಮಾಡಿ ಎಂದು ಸಲಹೆ ನೀಡಿದ್ದರು. ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಕೇಳಿದರು. ಶ್ರೀಗಳ ಮಾತಿನಂತೆ ನಾನು ಸಿನಿಮಾ ಮಾಡಲ್ಲ ಎಂದು ಸ್ಪಷ್ಟಪಡಿಸಿದರು

ರಾಜ್ಯ