
ದಕ್ಷಿಣ ಕನ್ನಡ : ರೈತರ ಸಾಲ ಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆಗೆ ಏನೂ ಲಾಭ ಆಗಿಲ್ಲ, ಆಗುವುದೂ ಇಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಶಿಕ್ಷಣ ಸಂಸ್ಥೆಗಳ ಸುಧೀಂದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕೇಂದ್ರ ಬಜೆಟ್ ಕುರಿತ ವಿಶ್ಲೇಷಣೆ ಮತ್ತು ಸಂವಾದದಲ್ಲಿ ಭಾಗಿಯಾಗಿ ಈ ಮಾತನ್ನು ಹೇಳಿದ್ದಾರೆ.
ರೈತರ ಸಾಲ ಮನ್ನಾ ಮಾಡಿದ್ದು, ದೇಶದ ಆರ್ಥಿಕತೆಗೆ ಯಾವುದೇ ಉಪಯೋಗವಾಗಿಲ್ಲ. ಯುಪಿಎ(UPA) ಸರ್ಕಾರ ಅಧಿಕಾರ ಅವಧಿಯಲ್ಲಿ ಅವರು ಚುನಾವಣೆಗೆ ಹೋಗಬೇಕಿತ್ತು 2009 ರಲ್ಲಿ, 2008ನೇ ವರ್ಷದ ಬಜೆಟ್‌ನಲ್ಲಿ ಅವರು ಮಾಡಿದ್ದೇನು ಗೊತ್ತಾ? ಒಂದು ಲಕ್ಷ ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿರುವುದು ಅಂತ ವ್ಯಂಗ್ಯವಾಡಿದ್ರು. ಇದನ್ನು ಮಾಡಿದ ಉದ್ದೇಶ, ಅವರು ಚುನಾವಣೆ ಗೆಲ್ಲುವ ಸಲುವಾಗಿ ಆಗಿತ್ತು. ರೈತರ ಸಾಲ ಮನ್ನಾ ಮಾಡಿದ್ದು ಮಾತ್ರ ಅವತ್ತಿನ ಮಟ್ಟಕ್ಕೆ ಅದೊಂದು ದೊಡ್ಡ ಸಹಾಯವಾಯ್ತು ಅಷ್ಟೇ ವಿನಃ ಅದರಿಂದ ದೇಶಕ್ಕೆ ಯಾವುದೇ ರೀತಿಯ ಆರ್ಥಿಕತೆ ಉಪಯೋಗ ಆಗಲಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ಕುಟುಕಿದರು.



ನಮ್ಮ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಮುಂದಿನ ವರ್ಷ ಚುನಾವಣೆ ಇದ್ದರೂ ಕೂಡ ಈ ರೀತಿಯ ದೇಶಕ್ಕೆ ನಷ್ಟವಾಗುವ ರೀತಿಯ ಜನಪ್ರಿಯ ಯೋಜನೆಗಳನ್ನು ಘೋಷಿಸಲು ಹೋಗಲಿಲ್ಲ. ಬದಲಾಗಿ ಹತ್ತು ಲಕ್ಷ ಕೋಟಿ ರೂ. ಹಣವನ್ನು ನಾವು ಹೂಡಿಕೆ ಮಾಡ್ತೇವೆ, ಮೂಲಸೌಕರ್ಯ ಸ್ಥಾಪಿಸುವ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಆ ಮೂಲಕ 30 ಲಕ್ಷ ಕೋಟಿ ರೂಪಾಯಿಯ ಲಾಭವನ್ನು ಈ ದೇಶದಲ್ಲಿ ನಾವು ಕಾಣುತ್ತೇವೆ ಎಂಬ ವಿಷನರಿ ಕೆಲಸವನ್ನು ಈ ದೇಶದ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮಾಡಿದೆ. ಇದು ಬಿಜೆಪಿ ಮಾಡೆಲ್ ಆಫ್ ಎಕನಾಮಿಕ್ಸ್ ಮತ್ತು ಕಾಂಗ್ರೆಸ್ ಮಾಡೆಲ್ ಆಫ್ ಎಕನಾಮಿಕ್ಸ್ ನಡುವೆ ಇರುವ ದೊಡ್ಡ ವ್ಯತ್ಯಾಸ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಸಂಸದ ತೇಜಸ್ವಿ ಸೂರ್ಯ ಅವರ ಈ ಹೇಳಿಕೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಅನೇಕರು ಇವರ ಮಾತುಗಳನ್ನು ಅಲ್ಲಗಳೆದಿದ್ದಾರೆ. ರೈತರ ಸಾಲಮನ್ನದಿಂದ ದೇಶಕ್ಕೆ ಲಾಭ ಇಲ್ಲಾಂದಾದ್ರೆ ದೊಡ್ಡ ದೊಡ್ಡ ಬ್ಯುಸಿನೆಸ್ ಮ್ಯಾನ್‌ಗಳ, ಶ್ರೀಮಂತ ಉದ್ಯಮಿಗಳ ಲಕ್ಷಾಂತ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೇನು ಲಾಭ ಅಂತ ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಕಷ್ಟ ಆಗುತ್ತಿದೆ ಆದ್ರೆ ಉದ್ಯಮಿಗಳ ಸಾಲ ಮನ್ನಾ ಮಾಡಲು ಕಷ್ಟ ಆಗುತ್ತಿಲ್ಲ ಅಂತ ಇನ್ನು ಹಲವರು ಟೀಕಿಸಿದ್ದಾರೆ.